ಕೆಎಸ್ಸಾರ್ಟಿಸಿ: ಗುತ್ತಿಗೆ ಆಧಾರದಲ್ಲಿ 50 ಎಲೆಕ್ಟ್ರಿಕಲ್ ಬಸ್‌ಗಳನ್ನು ಪಡೆಯಲು ಚಿಂತನೆ

Update: 2019-09-30 17:35 GMT

ಬೆಂಗಳೂರು, ಸೆ.30: ಫೇಮ್ ಇಂಡಿಯಾ 3ನೇ ಹಂತದ ಅಡಿಯಲ್ಲಿ ಕೆಎಸ್ಸಾರ್ಟಿಸಿ ಗುತ್ತಿಗೆ ಆಧಾರದಲ್ಲಿ ಪಡೆಯುತ್ತಿರುವ 50 ಎಲೆಕ್ಟ್ರಿಕಲ್ ಬಸ್‌ಗಳ ಮೂಲಕ ಪ್ರಮುಖ ನಾಲ್ಕು ಮಾರ್ಗಗಳಲ್ಲಿ ಸೇವೆ ನೀಡಲು ನಿರ್ಧರಿಸಿದೆ.

ಎರಡನೆ ಹಂತದ ಫೇಮ್ ಇಂಡಿಯಾದ 2ನೇ ಹಂತದ ಯೋಜನೆ ಅಡಿಯಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಮತ್ತು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ 400 ಎಲೆಕ್ಟ್ರಿಕಲ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಅನುಮತಿ ನೀಡಿದೆ. ಪ್ರತಿ ಬಸ್‌ಗೆ ಕೇಂದ್ರ ಸರಕಾರ ಸಬ್ಸಿಡಿಯನ್ನು ನೀಡಲಿದೆ. 400 ಬಸ್‌ಗಳ ಪೈಕಿ ಕೆಎಸ್ಸಾರ್ಟಿಸಿ 50 ಬಸ್‌ಗಳನ್ನು ಪಡೆಯುತ್ತಿದೆ.

ಕೆಎಸ್ಸಾರ್ಟಿಸಿ ಈಗಾಗಲೇ ನಿರ್ಧರಿಸುವಂತೆ ಬೆಂಗಳೂರಿನಿಂದ ಶಿವಮೊಗ್ಗ, ಮೈಸೂರು, ತುಮಕೂರು ಮತ್ತು ದಾವಣಗೆರೆ ಮಾರ್ಗದಲ್ಲಿ ಬಸ್‌ಗಳು ಸಂಚರಿಸಲಿವೆ. ಅದರಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ತುಮಕೂರು ಮಾರ್ಗದಲ್ಲಿ ತಲಾ 10 ಬಸ್‌ಗಳು ಸಂಚರಿಸಿದರೆ, ಬೆಂಗಳೂರು ಮತ್ತು ಮೈಸೂರಿನ ನಡುವೆ 20 ಬಸ್‌ಗಳು ಸೇವೆ ನೀಡಲಿವೆ.

ಪ್ರತಿ ಬಸ್ ಒಮ್ಮೆ ಚಾರ್ಜ್ ಮಾಡಿದ ನಂತರ ಗರಿಷ್ಠ 450 ಕಿ.ಮಿ. ಸಂಚರಿಸುವ ಸಾಮರ್ಥ್ಯ ಹೊಂದಿರಲಿವೆ. ಅದನ್ನಾಧರಿಸಿ ಮಾರ್ಗ ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗ 277, ದಾವಣಗೆರೆ 267, ಮೈಸೂರು 135 ಮತ್ತು ತುಮಕೂರು 72 ಕಿ.ಮಿ. ದೂರವಿದೆ. ಹೀಗಾಗಿ ಬಸ್ ಒಮ್ಮೆ ಚಾರ್ಜ್ ಮಾಡಿದರೆ ನಿಗದಿತ ದೂರ ಕ್ರಮಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಜತೆಗೆ ಆ ಮಾರ್ಗಗಳಲ್ಲಿ ಹೆಚ್ಚಿನ ಡೀಸೆಲ್ ಬಸ್‌ಗಳ ಸಂಚಾರವಿರುವ ಕಾರಣ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ.

43 ಆಸನಗಳು: ಗುತ್ತಿಗೆದಾರರು ಪೂರೈಸುವ ಎಲೆಕ್ಟ್ರಿಕ್ ಬಸ್‌ಗಳು ತಲಾ 43 ಪ್ರಯಾಣಿಕರನ್ನು ಮತ್ತು ಗರಿಷ್ಠ 3 ಸಾವಿರ ಕೆ.ಜಿ. ತೂಕ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರಲಿವೆ. ಪ್ರತಿ ಬಸ್‌ಗೆ 2 ಸಿಸಿ ಕ್ಯಾಮರಾ, ಚತುರ ಸಾರಿಗೆ ವ್ಯವಸ್ಥೆ, ಹವಾನಿಯಂತ್ರಿತ ವ್ಯವಸ್ಥೆ, ಎಲ್ಇಡಿ ಟಿವಿ ಮತ್ತಿತರ ವಿಶೇಷ ಸೌಕರ್ಯಗಳನ್ನು ಒಳಗೊಂಡಿರಲಿವೆ.

ಚಾಲಕರಿಗೆ ತರಬೇತಿ: ಖಾಸಗಿಯವರಿಂದ ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಪಡೆದರೂ, ಅಲ್ಲಿ ಕೆಎಸ್ಸಾರ್ಟಿಸಿಯ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಅದಕ್ಕಾಗಿ ಚಾಲನೆ, ಅದರ ದುರಸ್ತಿ ಕುರಿತಂತೆ ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಬಸ್ ಪೂರೈಸುವ ಸಂಸ್ಥೆ ತರಬೇತಿ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News