ಪರಿಸರ ಸಂರಕ್ಷಣೆಗೆ ನುಗ್ಗೆ, ಹೊಂಗೆ ಬೆಳೆಸುವಂತೆ ಒತ್ತಾಯ
ಬೆಂಗಳೂರು, ಸೆ.30: ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಪರ್ಯಾಯ ಇಂಧನ ಮರಗಳಾದ ನುಗ್ಗೆ ಮತ್ತು ಹೊಂಗೆ ಆಧಾರಿತ ಇಂಧನಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಉತ್ತೇಜಿಸಬೇಕು ಎಂದು ಬಾಲಕ ಅನಿರುದ್ಧ ಪೂಜಾರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಕ, ಮಾನವನ ದುರಾಸೆಯಿಂದ ಪ್ರಕೃತಿ ಸಂಪತ್ತು ಹಾಳಾಗಿದ್ದು, ಜಾಗತಿಕ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಭೂಮಿಯ ವಾತಾವರಣಕ್ಕೆ ಮಾರಕವಾಗುವ ಪೆಟ್ರೋಲ್, ಡೀಸೆಲ್ ಮತ್ತು ಕಲ್ಲಿದ್ದಲು ಆಧಾರಿತ ಉತ್ಪನ್ನಗಳನ್ನು ಕೂಡಲೇ ನಿಲ್ಲಿಸಿ ಜೈವಿಕ ಇಂಧನಗಳನ್ನು ಬಳಸಲು ಸರಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಪ್ರತಿ ಗ್ರಾಮಗಳಲ್ಲಿ ನುಗ್ಗೆ, ಹೊಂಗೆ ಮರಗಳನ್ನು ನೆಡುವ ಮೂಲಕ ರಾಜ್ಯದಾದ್ಯಂತ ನೂರು ಕೋಟಿ ಮರಗಳನ್ನು ವೇಗವಾಗಿ ನೆಡುವ ಅಭಿಯಾನಕ್ಕೆ ರಾಜ್ಯ ಸರಕಾರ ಬೆಂಬಲ ನೀಡಬೇಕು. ಇದರಿಂದ ಜಾಗತಿಕ ತಾಪಮಾನ ಮತ್ತು ಪರಿಸರ ಸಂರಕ್ಷಣೆಯಾಗುತ್ತದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನದ ಉನ್ಮಾದದಲ್ಲಿ ವಿನಾಶಕಾರಿ ಪರಮಾಣು ಬಾಂಬ್‌ಗಳನ್ನು ಹೊಂದಿರುವ ದೇಶಗಳು ಯುದ್ಧವನ್ನು ಪ್ರಚೋದಿಸುತ್ತಿವೆ. ಒಂದುವೇಳೆ ವಿಶ್ವದಲ್ಲಿ ಪರಮಾಣು ಯುದ್ಧ ನಡೆದರೆ ಇಡೀ ಭೂಮಿಯೇ ನಾಶವಾಗುವುದಲ್ಲದೆ, ಜೀವರಾಶಿಯೇ ಕಣ್ಮರೆಯಾಗುತ್ತದೆ. ಹಾಗಾಗಿ ಯುದ್ಧದ ಉನ್ಮಾದವನ್ನು ಪ್ರಚೋದಿಸುವ ಕಾರ್ಯವನ್ನು ನಿಲ್ಲಿಸುವಂತೆ 12 ವರ್ಷದ ಬಾಲಕ ಅನಿರುದ್ಧ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರೀನ್ ಬೆಂಗಳೂರು ಒಕ್ಕೂಟದ ಸಿಇಒ ನಂದನ್ ಪೂಜಾರ್, ಸತ್ಯಶ್ರೀ ನಂದನ್ ಉಪಸ್ಥಿತರಿದ್ದರು.