ಹೊಟೇಲ್ ಕಾರ್ಮಿಕರ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ: ಎಚ್.ಎಂ.ರೇವಣ್ಣ

Update: 2019-10-02 17:09 GMT

ಬೆಂಗಳೂರು, ಅ.2: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಹೊಟೇಲ್ ಕಾರ್ಮಿಕರಿಗೆ ಸೂರು ಸೇರಿ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಭರವಸೆ ನೀಡಿದ್ದಾರೆ.

ಬುಧವಾರ ನಗರದ ಎಸ್‌ಜೆಆರ್‌ಸಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಹೊಟೇಲ್ ಕಾರ್ಮಿಕರ 6ನೆ ಸಮ್ಮೇಳನ, ಗಾಂಧಿಯವರ 150ನೆ ಜನ್ಮದಿನದ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಗರದಲ್ಲಿ ಜಾಗದ ಸಮಸ್ಯೆ ಇರುವುದರಿಂದ ಹೊಟೇಲ್ ಕಾರ್ಮಿಕರಿಗೆ ನಗರ ಪ್ರದೇಶದಲ್ಲಿ ಸೂರು ಕಲ್ಪಿಸಿಕೊಡುವುದು ಕಷ್ಟದ ಕೆಲಸವಾಗುತ್ತದೆ. ನಾನು ಮೊದಲಿನಿಂದಲೂ ಕಾರ್ಮಿಕರ ಪರ ಹೋರಾಟ ಮಾಡುತ್ತಾ ಬಂದಿದ್ದೇನೆ. ಹೊಟೇಲ್ ಕಾರ್ಮಿಕರಿಗೆ ಸೂರು ಸೇರಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಎರಡ್ಮೂರು ದಶಕಗಳ ಹಿಂದೆ ರೇಷ್ಮೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಂದಿನ ಕಾರ್ಮಿಕ ಸಂಘಟನೆಗಳ ಜೊತೆಗೆ ಸೇರಿಕೊಂಡು ಹೋರಾಟ ನಡೆಸಿ, 10 ಸಾವಿರ ಹುದ್ದೆಗಳು ಖಾಯಂಗೊಳ್ಳುವಂತೆ ಮಾಡಿದ್ದೆವು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರವಿದ್ದಾಗ ಕೆಜಿಐಡಿ ಕಾರ್ಮಿಕರು ಸೇರಿ ಇನ್ನಿತರ ವಲಯದ ಹಲವು ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡಲಾಯಿತು. ಆದರೆ, ಈಗಿನ ಕೇಂದ್ರ ಸರಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿ, ಇರುವ ಉದ್ಯೋಗವನ್ನು ಕಸಿಯುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಐಎನ್‌ಟಿಯುಸಿ ರಾಷ್ಟ್ರೀಯ ಕಾರ್ಯದರ್ಶಿ ಶಾಂತಕುಮಾರ್ ಮಾತನಾಡಿ, ಆಟೋ ಮೊಬೈಲ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಹುದ್ದೆಗಳನ್ನು ಕಡಿತಗೊಳಿಸುತ್ತಿದ್ದಾರೆ. ಇದರಿಂದ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಪ್ರಶ್ನಿಸಲು ಹಾಗೂ ಧ್ವನಿ ಎತ್ತಲು ಐಎನ್‌ಟಿಯುಸಿ ಸೇರಿ ಇತರೆ ಸಂಘಟನೆಯಿಂದಾದರೂ ಒಬ್ಬರನ್ನು ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಶಾಸಕ ಎನ್.ಎ.ಹಾರಿಸ್, ಐಎನ್‌ಟಿಯುಸಿ ರಾಕೇಶ್ ಮಲ್ಲಿ, ಟಿಯುಸಿಸಿ ಜಿ.ಆರ್.ಶಿವಶಂಕರ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News