×
Ad

ಧೀನಬಂಧು ಟ್ರಸ್ಟ್‌ಗೆ ಭೂಮಿ ನೀಡಲು ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-02 22:55 IST

ಬೆಂಗಳೂರು, ಅ.2: ಶಿಕ್ಷಣ ಸಂಸ್ಥೆ ವಿಸ್ತೀರ್ಣದ ಉದ್ದೇಶಕ್ಕಾಗಿ ಧೀನಬಂಧು ಟ್ರಸ್ಟ್‌ಗೆ ಚಾಮರಾಜನಗರ ಜಿಲ್ಲೆಯಲ್ಲಿ 7 ಎಕರೆ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮಹಾತ್ಮಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ 2019’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಧೀನಬಂಧು ಸ್ವಯಂ ಸೇವಾ ಸಂಸ್ಥೆ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಅಂತಹ ಸಂಸ್ಥೆಯ ವಿಸ್ತೀರ್ಣದ ಉದ್ದೇಶದಿಂದ ಏಳು ಎಕರೆ ಭೂಮಿ ನೀಡುವಂತೆ 4 ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದರೂ, ಯಾರೂ ಈ ಬಗ್ಗೆ ಕ್ರಿಯಾಶೀಲರಾಗಿಲ್ಲ ಎಂಬ ಮಾತು ಕೇಳಿ ನೋವಾಯಿತು ಎಂದು ಅವರು ಹೇಳಿದರು.

ರಾಜ್ಯ ಸರಕಾರಗಳು ಹಲವಾರು ಉದ್ದೇಶಗಳಿಗಾಗಿ ಹಲವಾರು ಜನರಿಗೆ ಭೂಮಿಯನ್ನು ನೀಡಲಾಗುತ್ತಿದೆ. ಆದರೆ, ಶಿಕ್ಷಣದ ಸಂಸ್ಥೆ ಕಟ್ಟುವ ವ್ಯಕ್ತಿಗೆ ನೀಡಿಲ್ಲ ಎಂದರೆ ನಮ್ಮಲ್ಲಿನ ಅಧಿಕಾರಿಗಳು ಕೆಲಸ ಮಾಡುವ ಪದ್ಧತಿ ಅರ್ಥವಾಗುತ್ತದೆ. ಈ ಸಂಬಂಧ ಎರಡು ದಿನಗಳಲ್ಲಿ ಸಂಬಂಧಪಟ್ಟ ದಾಖಲೆಗಳು ತರಿಸಿ ಭೂಮಿ ಮಂಜೂರು ಮಾಡಿಸಿಕೊಡುತ್ತೇನೆ ಎಂದು ನುಡಿದರು.

ಗಾಂಧೀಜಿಯವರ ವಿಚಾರಧಾರೆಗಳನ್ನು ಇಂದಿನ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ, ಅಹಿಂಸೆ, ಸರಳ ಮಾರ್ಗದಲ್ಲಿ ಸಾಗಬೇಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರೊ.ಜಿ.ಎಸ್.ಜಯದೇವ, ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಿದರೆ ಅವರು ಇಲ್ಲಿನ ನೆಲಮೂಲದ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇಂದಿನ ಮಕ್ಕಳು ತಮ್ಮ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆದರೆ ಭಾವನಾತ್ಮಕವಾಗಿ ಪರಿವರ್ತನೆಯಾಗಲು ಸಾಧ್ಯ. ಅದರಿಂದ ಒಳ್ಳೆಯ ಮಾರ್ಗದಲ್ಲಿ ಯೋಚನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಇಂದಿನ ತಾಂತ್ರೀಕರಣದ ನಡುವಿನ ಶಿಕ್ಷಣದ ಮೂಲಕ ಮನುಷ್ಯತ್ವ ನಾಶವಾಗುತ್ತಿದೆ. ನಮ್ಮ ಅಂತರಂಗವನ್ನು ಕಟ್ಟುವ, ಎಲ್ಲರಿಗೂ ಸ್ಪಂದಿಸುವ ಶಿಕ್ಷಣ ಬೇಕಾಗಿದೆ. ಅಂತಹ ಶಿಕ್ಷಣ ಮಾತೃಭಾಷೆಯಿಂದ ಮಾತ್ರ ಸಿಗುತ್ತದೆ ಎಂದ ಅವರು, ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಅಂತಹ ಮಕ್ಕಳು ಹೆಚ್ಚು ಆಪ್ತರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಇಂಗ್ಲಿಷ್ ವ್ಯಾಮೋಹವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಮರು ಪರಿಶೀಲನೆ ಅಗತ್ಯ: ಹಿಂದಿನ ಮೈತ್ರಿ ಸರಕಾರ ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ತೀರ್ಮಾನ ಮಾಡಿದೆ. ಈ ಸಂಬಂಧ ಇಂದಿನ ಸರಕಾರ ಮರುಪರಿಶೀಲನೆ ಮಾಡಬೇಕು. ಈಗಾಗಲೇ ಆರಂಭಿಸಿರುವ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಜಯದೇವ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ವಾರ್ತಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಆಯುಕ್ತ ಸಿದ್ದರಾಮಪ್ಪ ಉಪಸ್ಥಿತರಿದ್ದರು.

ನಮ್ಮ ಸಮಾಜದಲ್ಲಿ ಗಾಂಧೀವಾದಿಗಳು ಸಿಗುತ್ತಾರೆ. ಆದರೆ, ನಮಗೆ ಗಾಂಧೀ ಹಾದಿಯಲ್ಲಿ ನಡೆಯುವವರು ಬೇಕಿದೆ. ಮಹಾತ್ಮಗಾಂಧೀಯನ್ನು ಅವಹೇಳನ ಮಾಡುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಇದು ಸರಿಯಲ್ಲ. ಗಾಂಧಿಯ ವಿಚಾರಧಾರೆಗಳನ್ನು ಜೀವಂತವಾಗಿಡಬೇಕು. ಹೀಗಾಗಿ, ರಾಜ್ಯದಲ್ಲಿ ಅವರು ಭೇಟಿ ನೀಡಿದ ಎಲ್ಲ ಸ್ಥಳಗಳನ್ನು ಸಂಕಲ್ಪದ ಸ್ಥಳಗಳಾಗಿ ಪರಿವರ್ತಿಸಿ, ಪ್ರವಾಸ ತಾಣಗಳನ್ನಾಗಿ ಮಾಡಲಾಗುವುದು.

-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News