ಗಾಂಧಿ ನಾಡಲ್ಲಿ ದೇಶದ್ರೋಹದ ಕಾನೂನು ರದ್ದಾಗಲಿ: ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ

Update: 2019-10-02 17:56 GMT

ಬೆಂಗಳೂರು, ಅ.2: ದೇಶದ ಆಡಳಿತ ವ್ಯವಸ್ಥೆಯನ್ನು ಪ್ರಶ್ನೆ ಮಾಡುವವರ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವಂತಹ ದೇಶದ್ರೋಹಿ ಕಾನೂನನ್ನು ರದ್ದು ಪಡಿಸುವುದೇ ಮಹಾತ್ಮ ಗಾಂಧೀಜಿಗೆ ನಾವು ಕೊಡುವ ಮೊದಲ ಗೌರವವೆಂದು ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ತಿಳಿಸಿದ್ದಾರೆ. 

ಬುಧವಾರ ಅಖಿಲ ಭಾರತ ಪ್ರಜಾ ವೇದಿಕೆ ನಗರದಲ್ಲಿ ಆಯೋಜಿಸಿದ್ದ ಇಂದಿನ ಗಾಂಧಿ-ಅಸಮ್ಮತಿ, ರಾಜ್ಯದ್ರೋಹ, ಜಾತ್ಯತೀತತೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬ್ರಿಟಿಷರ ಅನುಸರಿಸುತ್ತಿದ್ದ ಜನವಿರೋಧಿ ನೀತಿಗಳನ್ನು ಖಂಡಿಸುತ್ತಿದ್ದ ಗಾಂಧೀಜಿ ಸೇರಿದಂತೆ ಸ್ವಾತಂತ್ರ ಹೋರಾಟಗಾರರ ವಿರುದ್ಧ ದೇಶದ್ರೋಹದ ಪ್ರಕರಣದ ದಾಖಲಿಸಲಾಗುತ್ತಿತ್ತು. ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರಗಳ ಅನೀತಿಗಳ ವಿರುದ್ಧ ಮಾತನಾಡುವ ನಮ್ಮದೇ ಜನಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದು ದೇಶಪ್ರೇಮ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಗಾಂಧೀಜಿ ಪ್ರತಿಪಾದಿಸಿದ ತತ್ವಗಳು ಇವತ್ತು ಪ್ರಸ್ತುತವಾಗಿದೆ. ಭಿನ್ನಾಭಿಪ್ರಾಯಗಳಿಗೆ ಯಾವತ್ತೂ ಮನ್ನಣೆ ಕೊಡುತ್ತಿದ್ದ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್‌ರೊಂದಿಗಿನ ಚರ್ಚೆಗಳ ಮೂಲಕ ತಮ್ಮಲ್ಲಿದ್ದ ಹಲವು ಚಿಂತನೆಗಳನ್ನು ಬದಲಾವಣೆ ಮಾಡಿಕೊಂಡರು. ಆದರೆ, ಇಂದು ಕೇವಲ ಅಭಿಪ್ರಾಯ ವ್ಯಕ್ತ ಪಡಿಸುವವರನ್ನು ಕೊಲ್ಲುವಂತಹ ಉದ್ಧಟತನ ಪ್ರದರ್ಶಿಸಲಾಗುತ್ತದೆ ಎಂದು ಅವರು ವಿಷಾದಿಸಿದರು.

ಮಹಾತ್ಮ ಗಾಂಧೀಜಿ ಯಾವತ್ತೂ ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕಗೊಳಿಸಲಿಲ್ಲ. ಧಾರ್ಮಿಕ ಆಚರಣೆ ಎನ್ನುವುದು ಕೇವಲ ಮನೆಗೆ ಮಾತ್ರ ಸೀಮಿತವಾಗಿರಬೇಕೆಂದು ಅವರು ಭಾವಿಸಿದ್ದರು. ಹಿಂದುತ್ವವಾದಿಗಳಿಗೆ ಹಾಗೂ ಯಾವುದೇ ಧರ್ಮದ ಮತೀಯವಾದಿಗಳಿಗೆ ಬೆಂಬಲಿಸುತ್ತಿರಲಿಲ್ಲವೆಂದು ಅವರು ತಿಳಿಸಿದರು.

ಸಾಮಾಜಿಕ ಹೋರಾಟಗಾರ ಮಾರುತಿ ಮಾತನಾಡಿ, ಇವತ್ತು ದೇಶ ಎದುರಿಸುತ್ತಿರುವ ಹಿಂದುತ್ವ ಕೋಮುವಾದ, ಬಂಡವಾಳಶಾಹಿಯ ಮಾರುಕಟ್ಟೆ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯ ಸಮಪಾಲು, ಸಮಬಾಳು, ಗ್ರಾಮ ಸ್ವರಾಜ್ಯ ಚಿಂತನೆಗಳು ಪರ್ಯಾಯವಾಗಿವೆ. ಆದರೆ, ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಕೋಮುವಾದಿ ಹಾಗೂ ಬಂಡವಾಳಶಾಹಿಗಳ ಜೊತೆ ಕೈ ಜೋಡಿಸಿವೆ ಎಂದು ವಿಷಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News