ಗಾಂಧೀಜಿ ಮೌಲ್ಯಗಳು ಜೀವಂತವಾಗಿಡುವುದು ನಮ್ಮೆಲ್ಲರ ಕರ್ತವ್ಯ: ಪಿಎಫ್ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್

Update: 2019-10-02 18:00 GMT

ಬೆಂಗಳೂರು, ಅ.2: ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ತತ್ವ, ಆದರ್ಶ ಮತ್ತು ಹೋರಾಟವನ್ನು ಜೀವಂತವಾಗಿಡುವ ಮೂಲಕ ದೇಶದಲ್ಲಿ ಸಮಸಮಾಜವನ್ನು ನಿರ್ಮಿಸುವಲ್ಲಿ ಕಾರ್ಯಪ್ರವತ್ತರಾಗುವುದೇ ನಮ್ಮೆಲ್ಲರ ಆದ್ಯತೆಯಾಗಲಿ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ತಿಳಿಸಿದ್ದಾರೆ.

ಬುಧವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ’ಜನಾರೋಗ್ಯವೇ ರಾಷ್ಟ್ರ ಶಕ್ತಿ’ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಬೆಂಗಳೂರಿನ ಪುರಭವನದ ಮುಂಭಾಗದಲ್ಲಿ ರಾಷ್ಟ್ರೀಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯಂತವರ ಒಗ್ಗಟ್ಟಿನ ಹೋರಾಟದಿಂದ ಈ ದೇಶಕ್ಕೆ ಸ್ವಾತಂತ್ರ ದೊರೆಯಿತು. ಆದರೆ, ಗಾಂಧೀಜಿಯು ಕಂಡ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳನ್ನು ಹೊಂದಿರುವ ಸ್ವಾತಂತ್ರ ಭಾರತದ ಕಲ್ಪನೆಯು ಇಂದು ಮರೆಯಾಗಿದೆ. ಗಾಂಧೀಜಿಯು ಇಂದು ಕೇವಲ ನೋಟಿನಲ್ಲಿ ಮಾತ್ರ ಉಳಿದಿದ್ದಾರೆಯೇ ಹೊರತು ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ಇಲ್ಲದಂತೆ ಮಾಡಲಾಗಿದೆ ಎಂದು ಅವರು ವಿಷಾದಿಸಿದರು.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನರೇಂದ್ರ ಮೋದಿಯನ್ನು ಭಾರತದ ಎರಡನೇ ಪಿತಾಮಹ ಎಂದಿದ್ದು ಸರಿಯಲ್ಲ. ಭಾರತೀಯರಾದ ನಾವು ಮೋದಿಯನ್ನು ಈ ದೇಶದ ಪ್ರಧಾನ ಮಂತ್ರಿ ಎಂಬ ಕಾರಣಕ್ಕೆ ಮಾತ್ರ ಗೌರವಿಸುತ್ತೇವೆಯೇ ಹೊರತು ಅವರು ಪ್ರತಿಪಾದಿಸುವ ವಿಚಾರ ಮತ್ತು ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಗಾಂಧೀಜಿ ಮಾತ್ರ ನಮಗೆ ರಾಷ್ಟ್ರಪಿತರೇ ಹೊರತು ಅವರ ಸ್ಥಾನಕ್ಕೆ ಮೋದಿಯನ್ನು ಕೂರಿಸುವುದು ಸರಿಯಲ್ಲವೆಂದು ಅವರು ಹೇಳಿದರು.

ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ವಾಹಿದ್ ಸೇಠ್ ಮಾತನಾಡಿ, ’ಜನಾರೋಗ್ಯವೇ ರಾಷ್ಟ್ರ ಶಕ್ತಿ’ ಅಭಿಯಾನವನ್ನು ದೇಶದ ಪ್ರತಿಯೊಂದು ಹಳ್ಳಿಗಳಿಗೂ ತಲುಪಿಸಿ ಜನತೆಯನ್ನು ಆರೋಗ್ಯ ಮತ್ತು ಶಕ್ತಿಯುತರನ್ನಾಗಿಸುವ ಜಾಗೃತಿಯನ್ನು ಪಾಪ್ಯುಲರ್ ಫ್ರಂಟ್ ವರ್ಷಂಪ್ರತಿ ನಡೆಸುತ್ತಿದೆ. ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಹಾಗೂ ಪ್ರತಿಯೊಬ್ಬರು ದೈಹಿಕವಾಗಿ ಶಕ್ತಿಯುತರನ್ನಾಗಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವೆಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಅನಿವಾರ್ಯ ಸನ್ನಿವೇಶದಲ್ಲಿ ಉಪಯುಕ್ತವಾಗುವ ರಕ್ತವನ್ನು ದಾನಿಗಳಿಂದ ಸಂಗ್ರಹಿಸುವ ಸಲುವಾಗಿ ಬ್ಲಡ್ ಡೋನರ್ಸ್ ಫಾರಂನ್ನು ಉದ್ಘಾಟಿಸಲಾಯಿತು.

ವೇದಿಕೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾ, ಮಸ್ಜಿದ್ ಈ-ಅತೀಕ್ ಇಮಾಮ್ ಮುಫ್ತಿ ಇರ್ಷಾದ್, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಕಬಡ್ಡಿ ತರಬೇತುದಾರ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಪುರಭವನದ ಮುಂಭಾಗದಲ್ಲಿ ಯೋಗ ಪ್ರಾತ್ಯಕ್ಷಿಕೆ, ಆತ್ಮ ರಕ್ಷಣೆಯ ಕಲೆಗಳನ್ನು ಪ್ರದರ್ಶಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News