ಆನ್‌ಲೈನ್‌ನಲ್ಲಿ ಹಬ್ಬದ ಮಾರಾಟಗಳ ಲಾಭ ಪಡೆಯಲು ಬಯಸಿದ್ದೀರಾ?

Update: 2019-10-03 13:48 GMT

ದಸರಾ-ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಮಾರಾಟದ ಭರಾಟೆ ಶುರುವಾಗಿದೆ. ಅಮೆಝಾನ್,ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ತಾಣಗಳು ವಾರ್ಷಿಕ ಮೆಗಾ ಮಾರಾಟವನ್ನು ಹಮ್ಮಿಕೊಂಡು ವಿವಿಧ ಉತ್ಪನ್ನಗಳ ಮೇಲೆ ರಿಯಾಯಿತಿಗಳ ಮಹಾಪೂರವನ್ನೇ ಹರಿಸುತ್ತಿವೆ. ಭರ್ಜರಿ ಆಫರ್‌ಗಳ ಲಾಭ ಪಡೆಯಲು ಜನರು ಇ-ಕಾಮರ್ಸ್ ತಾಣಗಳಿಗೆ ಮುಗಿಬಿದ್ದಿರುವ ಈ ಸಮಯದಲ್ಲಿಯೇ ಈ ಹುಚ್ಚಾಟದ ಲಾಭವೆತ್ತಲು ಸೈಬರ್‌ಕ್ರಿಮಿನಲ್‌ಗಳು ಕ್ರಿಯಾಶೀಲರಾಗುತ್ತಾರೆ.

ಈಗ ಸಾಮಾನ್ಯವಾಗಿ ಎಲ್ಲರ ಬಳಿಯಲ್ಲೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು,ಸ್ಮಾರ್ಟ್‌ಫೋನ್‌ಗಳು ಇದ್ದೇ ಇವೆ. ಹೀಗಾಗಿ ಆನ್‌ಲೈನ್ ಖರೀದಿಯೂ ಸುಲಭವಾಗಿದೆ. ಆದರೆ ಆನ್‌ಲೈನ್‌ನಲ್ಲಿ ಖರೀದಿ ವೇಳೆ ಎಚ್ಚರಿಕೆ ವಹಿಸದಿದ್ದರೆ ಗ್ರಾಹಕರು ಹ್ಯಾಕರ್‌ಗಳ ಕೈಚಳಕದಿಂದಾಗಿ ಹಣವನ್ನು ಕಳೆದುಕೊಳ್ಳಬಹುದು. ಈ ಬಗ್ಗೆ ಕೆಲವು ಟಿಪ್ಸ್ ಇಲ್ಲಿವೆ.

►ಅಂತರ್ಜಾಲವನ್ನು ಹೇಗೆ ಸಂಪರ್ಕಿಸುತ್ತೀರಿ ಎನ್ನುವುದರ ಬಗ್ಗೆ ಎಚ್ಚರವಿರಲಿ:

ಆನ್‌ಲೈನ್ ಖರೀದಿಗೆ ಪಬ್ಲಿಕ್ ವೈ-ಫೈ ಅನ್ನು ಎಂದಿಗೂ ಬಳಸಬೇಡಿ. ನಿಮ್ಮ ಸಂಪರ್ಕವನ್ನು ಪ್ರತಿಬಂಧಿಸಲು ಹೊಂಚುಹಾಕುತ್ತಿರುವ ಸೈಬರ್ ಕ್ರಿಮಿನಲ್‌ಗಳ ಪಾಲಿಗೆ ಪಬ್ಲಿಕ್ ವೈ-ಫೈ ಸ್ವರ್ಗವಾಗಿದೆ. ಇಲ್ಲಿ ನಿಮ್ಮ ಪಾಸ್‌ವರ್ಡ್‌ಗಳು,ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಮತ್ತು ಇತರ ವೈಯಕ್ತಿಕ ಮಾಹಿತಿಗಳನ್ನು ಅವರು ಸುಲಭವಾಗಿ ಕದಿಯಬಲ್ಲರು. ನಿಮ್ಮದೇ ಆದ ವೈಫೈ ಅಥವಾ ಖಾಸಗಿ ಕಂಪ್ಯೂಟರ್ ಅಥವಾ ಮೊಬೈಲ್ ಡಾಟಾ ಬಳಸಿದ್ದರೂ ನೀವು ಭೇಟಿ ನೀಡುತ್ತಿರುವ ಸೈಟ್‌ಗಳು ಸುರಕ್ಷಿತ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ.

►ನಿಮ್ಮ ಮೊಬೈಲ್ ಸಾಧನಗಳನ್ನು ಸರಿಯಾಗಿ ನಿರ್ವಹಿಸಿ

 ಆಧುನಿಕ ಫೋನ್‌ಗಳು ನೀವು ಸಾಮಾನ್ಯವಾಗಿ ಸಂಪರ್ಕಿಸುವ ವೈರ್‌ಲೆಸ್‌ಗಾಗಿ ಸದಾ ಹುಡುಕಾಟದಲ್ಲಿರುತ್ತವೆ. ಆದರೆ ನಿಮ್ಮ ಪೋನ್ ಹುಡುಕಾಡುತ್ತಿರುವ ವೈರ್‌ಲೆಸ್ ಅಸೆಸ್ ಪಾಯಿಂಟ್(ಡಬ್ಲುಎಪಿ)ಗಳನ್ನು ಪತ್ತೆ ಹಚ್ಚಬಲ್ಲ ಟೂಲ್‌ಗಳು ಸೈಬರ್ ಕ್ರಿಮಿನಲ್‌ಗಳ ಬಳಿಯಿರುತ್ತವೆ ಮತ್ತು ಇಂತಹ ಪಾಯಿಂಟ್ ಪತ್ತೆ ಹಚ್ಚಿದ ಬಳಿಕ ಅವುಗಳ ಪೈಕಿ ಒಂದು ಎಂಬಂತೆ ಸೋಗು ಹಾಕುತ್ತವೆ. ನೀವು ಮನೆಯಿಂದ ದೂರವಿದ್ದಾಗ ನಿಮ್ಮ ಪೋನ್ ಅಥವಾ ಸಾಧನಗಳಲ್ಲಿ ಆಟೊಮ್ಯಾಟಿಕ್ ವೈ-ಫೈ ಸಂಪರ್ಕ ಸೇವೆಯನ್ನು ನಿಷ್ಕ್ರಿಯಗೊಳಿಸಿ.

►ಅಧಿಕೃತ ವೆಬ್‌ಸೈಟ್‌ಗಳಿಂದ ಅಧಿಕೃತ ಆ್ಯಪ್‌ಗಳನ್ನೇ ಡೌನ್‌ಲೋಡ್ ಮಾಡಿಕೊಳ್ಳಿ

ಆ್ಯಂಡ್ರಾಯ್ಡ್ ಮೊಬೈಲ್‌ಗಳು ಸೈಬರ್‌ಕ್ರಿಮಿನಲ್‌ಗಳ ಗುರಿಯಾಗುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಯಾವಾಗಲೂ ಅಧಿಕೃತ ವೆಬ್‌ಸೈಟ್‌ಗಳಿಂದಲೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಪರಿಚಿತ ಮೂಲಗಳಿಂದ ಆ್ಯಪ್ ಇನ್‌ಸ್ಟಾಲೇಷನ್‌ಗೆ ಎಂದೂ ಅವಕಾಶ ನೀಡಬೇಡಿ. ಅಲ್ಲದೆ ಅಧಿಕೃತ ಆ್ಯಪ್ ಸ್ಟೋರ್‌ನಿಂದ ಸೆಕ್ಯೂರಿಟಿ ಟೂಲ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್‌ನ್ನು ನಿಯಮಿತವಾಗಿ ಸ್ಕಾನ್ ಮಾಡುತ್ತಿರಿ.

►ಪರಿಚಿತವಲ್ಲದ ಆನ್‌ಲೈನ್ ಸೈಟ್‌ನಿಂದ ಶಾಪಿಂಗ್‌ಗೆ ಮುನ್ನ ಎರಡೆರಡು ಬಾರಿ ಯೋಚಿಸಿ

ನಿವು ನಿಮಗೆ ಪರಿಚಿತವಲ್ಲದ ಆನ್‌ಲೈನ್ ಸೈಟ್‌ನಲ್ಲಿ ಶಾಪಿಂಗ್ ಮಾಡುವುದಿದ್ದರೆ ನಿಮ್ಮನ್ನು ಮತ್ತು ನಿಮ್ಮ ದುಡ್ಡನ್ನು ರಕ್ಷಿಸಿಕೊಳ್ಳಲು ಕೆಲವು ಪ್ರಾಥಮಿಕ ಕ್ರಮಗಳನ್ನು ಅನುಸರಿಸಿ.

 ಲಿಂಕ್‌ವೊಂದನ್ನು ಕ್ಲಿಕ್ಕಿಸುವ ಮನ್ನ ಯುಆರ್‌ಎಲ್‌ನ್ನು ಪರಿಶೀಲಿಸಲು ಮೌಸ್‌ನ್ನು ಅದರ ಮೇಲೆ ಆಡಿಸಿ. ಅಕ್ಷರದ ಬದಲು ನಂಬರ್ ಕಂಡು ಬರುತ್ತಿದ್ದರೆ( ಉದಾ:amaz0n.com) ಅದನ್ನು ಕ್ಲಿಕ್ಕಿಸಲೇಬೇಡಿ. ನಿಮ್ಮ ಸರ್ಚ್ ಇಂಜಿನ್‌ನಲ್ಲಿ ಸೈಟ್ ಹೆಸರನ್ನು ನಮೂದಿಸಿ ಯಾರಾದರೂ ಅದರ ವಿರುದ್ಧ ದೂರಿಕೊಂಡಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಿ ಮತ್ತು ಲಿಂಕ್‌ನ್ನು ಕ್ಲಿಕ್ಕಿಸುವ ಬದಲು ನೇರವಾಗಿ ಸೈಟ್‌ಗೆ ಭೇಟಿ ನೀಡಿ.

ಸೈಟ್‌ನಲ್ಲಿ ಬಹಳಷ್ಟು ಪಾಪ್‌ಅಪ್‌ಗಳು,ಕೆಟ್ಟ ವ್ಯಾಕರಣ,ಅಸ್ಪಷ್ಟ ವಿವರಣೆಗಳು ಮತ್ತು ಶಬ್ದಗಳಲ್ಲಿ ಹಲವಾರು ಸ್ಪೆಲ್ಲಿಂಗ್ ತಪ್ಪುಗಳಿದ್ದರೆ ಅದು ಅನಧಿಕೃತವಾಗಿರಬಹುದು ಮತ್ತು ಅದರಿಂದ ತಕ್ಷಣ ಹೊರಕ್ಕೆ ಬನ್ನಿ.

ನಂಬಲಾಗದಷ್ಟು ಕಡಿಮೆ ಬೆಲೆಗಳಲ್ಲಿ ಆಫರ್‌ಗಳನ್ನು ನೀಡುವ ಸೈಟ್‌ಗಳನ್ನು ಎರಡೆರಡು ಬಾರಿ ಪರೀಕ್ಷಿಸಿ. ಏಕೆಂದರೆ ಅದು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡನ ಮಾಹಿತಿಗಳನ್ನು ಸಂಗ್ರಹಿಸಲು ಒಡ್ಡಿರುವ ಆಮಿಷವೂ ಆಗಿರಬಹುದು.

ಶಾಪಿಂಗ್‌ಗೆ ಮುನ್ನ ಹಣ ಪಾವತಿ ವಿಧಾನವನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಬ್ಯಾಂಕ್‌ನಿಂದ ನೇರ ಪಾವತಿ,ವೈರ್ ಟ್ರಾನ್ಸ್‌ಫರ್ ಅಥವಾ ಪತ್ತೆಹಚ್ಚಲಾಗದ ಪಾವತಿ ರೂಪ ಅಗತ್ಯವಾಗಿರುವ ಸೈಟ್‌ಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬೇಡಿ.

ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳು ವಂಚನೆಯ ವಿರುದ್ಧ ಅಂತರ್ಗತ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವುದರಿಂದ ಮತ್ತು ನಿಮ್ಮ ಉಳಿತಾಯ ಖಾತೆಯೊಂದಿಗೆ ನೇರ ಸಂಪರ್ಕವನ್ನು ಹೊಂದಿರುವುದಿಲ್ಲವಾದ್ದರಿಂದ ಆನ್‌ಲೈನ್ ಶಾಪಿಂಗ್ ಮಾಡಲು ಅದನ್ನೇ ಬಳಸಿ, ಡೆಬಿಟ್ ಕಾರ್ಡ್ ಬಳಸಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News