ಮಾದಕ ವಸ್ತು ದಾಸನಾಗಿದ್ದ ಸ್ನೇಹಿತನ ಪರ ಅರ್ಜಿ: ವೈದ್ಯ ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದ ಹೈಕೋರ್ಟ್

Update: 2019-10-03 17:13 GMT

ಬೆಂಗಳೂರು, ಅ.3: ಪ್ರತಿಯೊಬ್ಬ ಪ್ರಜೆಗೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಸಂವಿಧಾನವೇ ನೀಡಿದೆ, ಆದರೆ, ನನ್ನ ಸ್ನೇಹಿತನನ್ನು ಆತನ ತಂದೆ, ತಾಯಿ ಅವನ ಅನುಮತಿ ಇಲ್ಲದೆ ಮಾದಕವಸ್ತು ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಿಸಿ, ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದು ಆಕ್ಷೇಪಿಸಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಮತ್ತೊಬ್ಬರ ಮನೆಯ ಆಂತರಿಕ ವಿಷಯದಲ್ಲಿ ತಲೆ ಹಾಕಬೇಡಿ. ನಿಮ್ಮ ಕೆಲಸವನ್ನು ನೋಡಿಕೊಂಡು ಸುಮ್ಮನೆ ಇರಿ ಎಂದು ವೌಖಿಕವಾಗಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಮುಚ್ಚಳಿಕೆಯೊಂದನ್ನೂ ಬರೆಯಿಸಿಕೊಂಡು ಕಳುಹಿಸಿದೆ.

ಏನಿದು ಪ್ರಕರಣ: ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞ ಆಗಿರುವ 24 ವರ್ಷದ ಮಗನು, ಗಾಂಜಾ ಸೇವನೆ ಚಟಕ್ಕೆ ಬಿದ್ದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಲಕ್ಷಣಗಳು ಪೋಷಕರಿಗೆ ಕಂಡು ಬಂದಿವೆ. ಈ ಚಟವನ್ನು ಬಿಡಿಸುವುದಕ್ಕಾಗಿ ಪೋಷಕರು ಮಗನನ್ನು ನಗರದ ಖಾಸಗಿ ವ್ಯಸನಮುಕ್ತಿ ಕೇಂದ್ರವೊಂದಕ್ಕೆ ದಾಖಲಿಸಿ, ಮನೋಸಾಮಾಜಿಕ ಆಪ್ತ ಸಲಹೆ ಕೊಡಿಸುತ್ತಿದ್ದಾರೆ. ಆದರೆ, ಈ ಯುವಕನ ಸ್ನೇಹಿತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯು ನನ್ನ ಸ್ನೇಹಿತನ ಅನುಮತಿ ಇಲ್ಲದೆ, ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಿಸಿ, ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು.

ವ್ಯಸನಮುಕ್ತಿ ಕೇಂದ್ರಕ್ಕೆ ಭೇಟಿ ನೀಡಿದ್ದ ಪೊಲೀಸರು, ವೈದ್ಯ ವಿದ್ಯಾರ್ಥಿಗೆ ಚಿಕಿತ್ಸೆ ನೀಡುತ್ತಿರುವುದರ ಬಗ್ಗೆ ವಿಚಾರಣೆ ನಡೆಸಿ ಖಚಿತಪಡಿಸಿಕೊಂಡಿದ್ದಾರೆ. ಈ ಕುರಿತ ದಾಖಲೆ ಹಾಗೂ ಫೋಟೋಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಪೋಷಕರು ಅಥವಾ ಕೇಂದ್ರದವರು ಆತನನ್ನು ಅಕ್ರಮ ಬಂಧನದಲ್ಲಿಟ್ಟಿಲ್ಲ. ಕಾನೂನು ಬದ್ಧವಾಗಿಯೇ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದುಕೊಂಡು, ನಿಮ್ಮ ಕೆಲಸವನ್ನು ನೋಡಿಕೊಂಡು ಸುಮ್ಮನೆ ಇರಿ ಎಂದು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News