ಪವಿತ್ರ ಆರ್ಥಿಕತೆಯಿಂದ ಅಸಮಾನತೆ ನಿವಾರಣೆ ಸಾಧ್ಯ: ಪರಿಸರ ಹೋರಾಟಗಾರ್ತಿ ವಂದನಾಶಿವ
ಬೆಂಗಳೂರು, ಅ.3: ಪವಿತ್ರ ಆರ್ಥಿಕತೆಯೆಂದರೆ ಒಂದು ನಿರಂತರತೆಯ ಬದುಕು, ಘನತೆಯ ಬದುಕು ಹಾಗೂ ಜೀವನೋಪಾಯದ ಮಾರ್ಗವಾಗಿದ್ದು, ಇವತ್ತು ದೇಶ ಎದುರಿಸುತ್ತಿರುವ ಅಸಮಾನತೆ ಹಾಗೂ ನಿರುದ್ಯೋಗಕ್ಕೆ ಪವಿತ್ರ ಆರ್ಥಿಕತೆಯಿಂದ ಮಾತ್ರ ಪರಿಹಾರ ಸಾಧ್ಯವೆಂದು ಪರಿಸರ ಹೋರಾಟಗಾರ್ತಿ ವಂದನಾಶಿವ ಅಭಿಪ್ರಾಯಿಸಿದ್ದಾರೆ.
ಗ್ರಾಮ ಸೇವಾ ಸಂಘ ಆರಂಭಿಸಿರುವ ’ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’ದ ಎರಡನೆಯ ದಿನದ ಉಪವಾಸ ಸತ್ಯಾಗ್ರಹದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮೊಳಗಿನ ತಪ್ಪುಕಲ್ಪನೆಗಳು ಮತ್ತು ವಿರೋಧಾಭಾಸಗಳಿಂದ ದೇಶದಲ್ಲಿ ಹಲವು ಸಮಸ್ಯೆಗಳು ಉಂಟಾಗಿದೆ. ಇದನ್ನು ಅರಿಯುವಂತಹ ಕೆಲಸವಾಗಬೇಕೆಂದು ತಿಳಿಸಿದರು.
ಪವಿತ್ರ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುವ ಪ್ರಕ್ರಿಯೆಯಾಗಿ ಮಣ್ಣು, ಆಹಾರ, ಬೀಜ ಮತ್ತು ರೈತರ ಜೊತೆ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನಾನು ಇಂದು ಪವಿತ್ರ ಆರ್ಥಿಕತೆಯ ಸತ್ಯಾಗ್ರಹದಲ್ಲಿ ಭಾಗವಹಿಸಲು ಕಾರಣವೆಂದರೆ, ಭಾರತದಲ್ಲಿ ಸುಮಾರು 320 ಸಾವಿರದಷ್ಟು ಮಂದಿ ರೈತರ ಆತ್ಮಹತ್ಯೆ, ಭೂಮಿಯಲ್ಲಿ ಸಾಯುತ್ತಿರುವ ಚಿಟ್ಟೆ, ಹಕ್ಕಿ ಹಾಗೂ ದುಂಬಿಗಳು, ಬತ್ತಿ ಹೋಗುತ್ತಿರುವ ನೀರು, ಇವೆಲ್ಲವೂ ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿವೆ ಎಂದು ಆತಂಕಪಟ್ಟರು.
ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಉದ್ಯೋಗ ಮತ್ತು ಪರಿಸರವನ್ನು ಜೊತೆಗೇ ಉಳಿಸಿಕೊಳ್ಳಬೇಕಾದ ಕಾಲವಿದು. ನೆರೆ ಹಾಗೂ ಪ್ರವಾಹಪೀಡಿತ ಜನರ ಧ್ವನಿ ಕೇಳದ ಸರಕಾರಗಳಿಗೆ ಜನದನಿಯನ್ನು ತಲುಪಿಸಲು ಇದೇ ಅ. 10ರಂದು ’ವಿಧಾನಸೌಧ ಮುತ್ತಿಗೆ’ ಹಾಕಲಾಗುತ್ತದೆ ಎಂದು ಕರೆ ನೀಡಿದ್ದಾರೆ.
ಹಸಿರುದಳ ಸಹಸಂಸ್ಥಾಪಕಿ ನಳಿನಿ ಶೇಖರ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಸತ್ಯಾಗ್ರಹಕ್ಕೆ ಭಾಗವಹಿಸಿದ್ದರು. ಗ್ರಾಮ ಸೇವಾ ಸಂಘದ ಕಾರ್ಯಕರ್ತ ಅದ್ನಾನ್ ಖಾನ್, ಲೋಕವಿದ್ಯಾ ವೇದಿಕೆ ಕಾರ್ಯಕರ್ತ ಡಾ. ಜೆ.ಕೆ.ಸುರೇಶ್, ಪರಿಸರ ಹೋರಾಟಗಾರ್ತಿ ವಂದನಾಶಿವ, ಪತ್ರಕರ್ತ ಸುಗತ ಶ್ರೀನಿವಾಸರಾಜು ಮತ್ತು ಎಸ್.ಆರ್.ಆರಾಧ್ಯ ಎರಡನೆಯ ದಿನದ ಪವಿತ್ರ ಆರ್ಥಿಕತೆಗಾಗಿ ನಡೆಯುತ್ತಿರುವ ಉಪವಾಸದಲ್ಲಿ ಭಾಗಿಗಳಾದರು.
ಇದೇ ವೇಳೆ ಪರಿಸರ ಹೋರಾಟಗಾರ್ತಿ ವಂದನಾಶಿವ, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಇತರೆ ಕಾರ್ಮಿಕ ನೌಕರರ ಒಕ್ಕೂಟದ ಅಧ್ಯಕ್ಷ ಟಿ.ಎಸ್. ಅನಂತರಾಮ್, ಉಪಾಧ್ಯಕ್ಷ ಡಿ.ಗಂಗಭೈರಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಎ.ಗಂಗಣ್ಣ ಮತ್ತು ಸಾರ್ವಜನಿಕರ ಜೊತೆ ಮುಕ್ತ ಸಂವಾದ ನಡೆಯಿತು.