ಅ.10 ರಿಂದ ಅಂತರ್‌ರಾಷ್ಟ್ರೀಯ ಚೆಸ್ ಪಂದ್ಯಾವಳಿ
ಬೆಂಗಳೂರು, ಅ.3: ಕುಂದಾಪುರದ ಕಶ್ವಿ ಚೆಸ್ ಶಾಲೆ ಮತ್ತು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಅ.10ರಿಂದ 17ರವರೆಗೆ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ‘ಅಂತರ್‌ರಾಷ್ಟ್ರೀಯ ಮಟ್ಟದ ಮುಕ್ತ ಫಿಡೆ ರೇಟಿಂಗ್’ ಚೆಸ್ ಪಂದ್ಯಾವಳಿ ಆಯೋಜಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೆಸ್ ಶಾಲೆಯ ಮಾಲಕ ಬಿ.ನರೇಶ್, ಮಕ್ಕಳು ಬೌದ್ಧಿಕವಾಗಿ ಬೆಳೆಯಲು ಚೆಸ್ ಆಟ ಅತ್ಯಂತ ಪೂರಕವಾಗಿದ್ದು, ಕಶ್ವಿ ಚೆಸ್ ಶಾಲೆ ತರಬೇತಿ ನೀಡುವುದಲ್ಲದೇ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಪಂದ್ಯಾವಳಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಕರ್ನಾಟಕ ಚೆಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ಹನುಮಂತ, ಅಂತರ್‌ರಾಷ್ಟ್ರೀಯ ಚೆಸ್ ಆಟಗಾರ ಕಿಶನ್ ಗಂಗೊಳ್ಳಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಹೊಸದಿಲ್ಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯ ಹಾಗೂ ವಿದೇಶಗಳಿಂದ ಒಂದು ಸಾವಿರ ಚೆಸ್ ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ. 8, 10, 12, 15 ವರ್ಷದ ಮಕ್ಕಳು, ಓಪನ್ ಹಾಗೂ ವಿಶಿಷ್ಟ ಚೇತನರು ಸೇರಿ 16 ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, 161 ಟ್ರೋಫಿಗಳು, 20,32,000 ರೂ. ನಗದು ಬಹುಮಾನ ನೀಡಲಾಗುವುದು ಎಂದರು.
ಒಂದೊಂದು ವಿಭಾಗದಲ್ಲಿ ಮೊದಲ ಬಹುಮಾನ 1 ಲಕ್ಷ ರೂ., ಎರಡನೇ ಬಹುಮಾನ 70 ಸಾವಿರ ರೂ., ಮೂರನೇ ಬಹುಮಾನ 40 ಸಾವಿರ ರೂ., ನಾಲ್ಕನೇ ಬಹುಮಾನ 25 ಸಾವಿರ ರೂ., ಐದನೇ ಬಹುಮಾನ 20 ಸಾವಿರ ರೂ., ಆರರಿಂದ ಹತ್ತನೇ ಬಹುಮಾನ 15 ಸಾವಿರ ರೂ. ಜತೆಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಹಾಗೇ ಪ್ರತಿದಿನ ಸಂಜೆ 8ರಿಂದ ಅಂತರ್ ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.