ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯಲ್ಲಿ ನೂರಾರು ಕೋಟಿ ಅವ್ಯವಹಾರ: ಎನ್.ಆರ್.ರಮೇಶ್ ಆರೋಪ

Update: 2019-10-03 17:30 GMT

ಬೆಂಗಳೂರು, ಅ.3: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಿಂದಿನ ಮೈತ್ರಿ ಆಡಳಿತಾವಧಿಯಲ್ಲಿನ ರಾಜಕಾಲುವೆ ಅಭಿವೃದ್ಧಿ ಹಾಗೂ ಹೂಳೆತ್ತಿರುವ ಕಾಮಗಾರಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದ್ದು, ಅದನ್ನು ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಬೇಕು ಎಂದು ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿನ 9 ವಲಯಗಳಲ್ಲಿ 210.91 ಕಿ.ಮೀ. ಉದ್ದದ ರಾಜಕಾಲುವೆಗಳಲ್ಲಿ ಒಟ್ಟು 6,49,600 ಕ್ಯೂಬಿಕ್ ಮೀಟರ್‌ನಷ್ಟು ಬೃಹತ್ ಪ್ರಮಾಣದ ಹೂಳು ತೆಗೆಯಲು 29 ಕೋಟಿ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆಪಾದಿಸಿದರು.

ರಾಜಕಾಲುವೆ ಅಧಿಕಾರಿಗಳು ಶೇ.75 ರಷ್ಟು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ರಾಜಕಾಲುವೆಯ ಮುಖ್ಯ ಅಭಿಯಂತರ ಬಿ.ಎಸ್. ಪ್ರಹ್ಲಾದ್ ಸೇರಿದಂತೆ ಎಲ್ಲ 8 ವಲಯಗಳ ರಾಜಕಾಲುವೆ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಎಸಿಬಿ, ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ ಎಂದು ರಮೇಶ್ ತಿಳಿಸಿದರು.

842 ಕಿ.ಮೀ. ರಾಜಕಾಲುವೆಯ ಪೈಕಿ ಸುಮಾರು 400ಕಿ.ಮೀ. ಉದ್ದದ ರಾಜಕಾಲುವೆಗಳು ಹಾಗೂ ಅಕ್ಕಪಕ್ಕದಲ್ಲಿ 600 ಹೆಕ್ಟೇರ್‌ಗೂ ಹೆಚ್ಚು ವಿಸ್ತ್ರೀರ್ಣದ ಬಫರ್ ಜೋನ್ ಪ್ರದೇಶಗಳು ಒತ್ತುವರಿಯಾಗಿದೆ. ಈ ಪೈಕಿ 2,515 ಒತ್ತುವರಿ ಪ್ರಕರಣವನ್ನ ಪತ್ತೆಹಚ್ಚಲಾಗಿದ್ದು, 428 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.

ರಾಜಕಾಲುವೆಯ ಪುನಶ್ಚೇತನ ಹೆಸರಿನಲ್ಲೂ ಭಾರೀ ಅಕ್ರಮ ನಡೆದಿದೆ. ನಾಲ್ಕು ರಾಜಕಾಲುವೆಗಳಿಗೆ ಸಂಬಂಧಪಟ್ಟಂತೆ ಆರು ಪ್ಯಾಕೇಜ್‌ಗಳಲ್ಲಿ 800 ಕೋಟಿ ರೂ. ಮೊತ್ತದ ಕಾಮಗಾರಿಯಲ್ಲಿ ಕನಿಷ್ಠ 200 ಕೋಟಿ ರೂ. ಮೊತ್ತ ಭ್ರಷ್ಟರ ಪಾಲಾಗಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News