ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆ ನಿಮ್ಮನ್ನು ಖಿನ್ನತೆಗೆ ತಳ್ಳಬಹುದು

Update: 2019-10-04 14:26 GMT

ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್ ಡಿವೈಸ್‌ಗಳ ಅತಿಯಾದ ಗೀಳು ಹೊಂದಿರುವವರಲ್ಲಿ ನೀವೂ ಒಬ್ಬರಾಗಿದ್ದರೆ ನೀವು ಖಿನ್ನತೆಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದೀರಿ ಎಂದೇ ಅರ್ಥ. ಸ್ನೇಹಿತರು ಮತ್ತು ಕುಟುಂಬದ ಜೊತೆಗೆ ಸಮಯವನ್ನು ಕಳೆಯುವ ಬದಲು ತಮ್ಮ ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಮುಳುಗಿರುವವರು ನಿರ್ದಿಷ್ಟ ಅವಧಿಯ ಬಳಿಕ ಒಂಟಿತನ ಮತ್ತು ಖಿನ್ನತೆಯಿಂದ ನರಳಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಬೆಟ್ಟು ಮಾಡಿದೆ. ವರದಿಯು ವಿಶೇಷವಾಗಿ ತಮ್ಮ ಫೋನ್‌ಗಳಿಗೆ ಅಂಟಿಕೊಂಡಿರುವ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಎಚ್ಚರಿಕೆಯನ್ನು ನೀಡಿದೆ.

ಸ್ಮಾರ್ಟ್‌ಫೋನ್ ಅವಲಂಬನೆ ಹಾಗೂ ಒಂಟಿತನ ಮತ್ತು ಖಿನ್ನತೆಯ ಲಕ್ಷಣಗಳಿಗೂ ಸಂಬಂಧವಿದೆ ಎನ್ನುವುದನ್ನು ಸಂಶೋಧಕರು ಸಾಬೀತುಗೊಳಿಸಿದ್ದಾರೆ. ಆದರೆ ಇದರ ಉಲ್ಟಾವಾದವಾಗಿರುವ,ಒಂಟಿತನ ಮತ್ತು ಖಿನ್ನತೆಯಿಂದ ನರಳುತ್ತಿರುವವರೇ ತಮ್ಮ ಮೊಬೈಲ್ ಫೋನ್‌ಗಳಿಗೆ ದಾಸರಾಗುತ್ತಾರೆ ಎನ್ನುವುದು ಸಹ ನಿಜವೇ ಎನ್ನುವುದನ್ನು ಸಂಶೋಧಕರು ಇನ್ನಷ್ಟೇ ಕಂಡುಕೊಳ್ಳಬೇಕಿದೆ.

ಅರಿರೆನಾ ವಿವಿಯ ಸಂಶೋಧಕರ ತಂಡವೊಂದರ ಈ ಅಧ್ಯಯನವನ್ನು 18ರಿಂದ 20 ವರ್ಷ ವಯೋಮಾನದ 350 ಜನರ ಮೇಲೆ ನಡೆಸಲಾಗಿತ್ತು. ಸ್ಮಾರ್ಟ್ ಫೋನ್‌ಗಳ ಮೇಲಿನ ಅವಲಂಬನೆ ಅಥವಾ ಅತಿಯಾದ ಬಳಕೆಯು ಖಿನ್ನತೆ ಮತ್ತು ಒಂಟಿತನಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಸಂಶೋಧಕರು ಈ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

ಸ್ಮಾರ್ಟ್ ಫೋನ್ ಅವಲಂಬನೆಯು ನಂತರದ ಖಿನ್ನತೆಯ ಲಕ್ಷಣಗಳನ್ನು ನೇರವಾಗಿ ಸೂಚಿಸುತ್ತದೆ ಎನ್ನುವುದು ಈ ಅಧ್ಯಯನದ ಪ್ರಮುಖ ಫಲಿತಾಂಶವಾಗಿದೆ ಎಂದಿದ್ದಾರೆ ಅಧ್ಯಯನ ತಂಡದ ಸದಸ್ಯ ಪ್ರೊ.ಲ್ಯಾಪಿಯರ್.

ಜನರು ತಮ್ಮ ಸ್ಮಾರ್ಟ್ ಫೋನ್‌ಗಳನ್ನು ಅತಿಯಾಗಿ ಅವಲಂಬಿಸಿದಾಗ ಮತ್ತು ಅದರ ಬಳಕೆ ಸಾಧ್ಯವಾಗದಿದ್ದ ಸಂದರ್ಭಗಳಲ್ಲಿ ಆತಂಕವನ್ನು ಅನುಭವಿಸುತ್ತಾರೆ ಎನ್ನುವುದು ಇಲ್ಲಿಯ ಸಮಸ್ಯೆ. ಇಂತಹ ಬಳಕೆ ಅವರ ದೈನಂದಿನ ಜೀವನಕ್ಕೆ ಹಾನಿಯನ್ನುಂಟು ಮಾಡುತ್ತದೆ ಎನ್ನುತ್ತಾರೆ ಅವರು.

ಸಮಸ್ಯೆಯ ದಿಶೆಯನ್ನು ಗುರುತಿಸಲು ಸಾಧ್ಯವಾದರೆ ಮಾತ್ರ ಅದಕ್ಕೆ ಪರಿಹಾರವನ್ನು ಸಾಧಿಸಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.

ಖಿನ್ನತೆ ಮತ್ತು ಒಂಟಿತನ ಸ್ಮಾರ್ಟ್ ಫೋನ್ ಅವಲಂಬನೆಗ ಕಾರಣವಾಗಿದ್ದರೆ ನಾವು ಜನರ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ಮೂಲಕ ಅವಲಂಬನೆಯನ್ನು ಕಡಿಮೆ ಮಾಡಬಹುದು. ಆದರೆ ನಾವು ಕಂಡುಕೊಂಡಿರುವಂತ ಸ್ಮಾರ್ಟ್ ಫೋನ್ ಅವಲಂಬನೆಯು ಖಿನ್ನತೆ ಮತ್ತು ಒಂಟಿತನಕ್ಕೆ ಕಾರಣವಾಗಿದ್ದರೆ ಅದರ ತೀವ್ರತೆಯನ್ನು ಶಮನಿಸಲು ನಾವು ಸ್ಮಾರ್ಟ್‌ಫೋನ್ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ವರದಿಯ ಸಹಲೇಖಕ ಪೆಂಗ್‌ಫೀ ಝಾವೊ ಹೇಳಿದ್ದಾರೆ.

ಯುವಜನರು ಸ್ಮಾರ್ಟ್‌ಫೋನ್ ಅವಲಂಬನೆಗೆ ಸುಲಭವಾಗಿ ಪಕ್ಕಾಗುತ್ತಾರೆ ಮತ್ತು ಅವರು ಅದಾಗಲೇ ಖಿನ್ನತೆ ಮತ್ತು ಒಂಟಿತನಕ್ಕೆ ಸುಲಭ ಭೇದ್ಯರಾಗಿರುವುದರಿಂದ ಸ್ಮಾರ್ಟ್‌ಫೋನ್ ಅವರ ಮೇಲೆ ಭಾರೀ ನಕಾರಾತ್ಮಕ ಪ್ರಭಾವವನ್ನು ಬೀರಬಹುದು ಎಂದಿದ್ದಾರೆ.

ಒತ್ತಡದಲ್ಲಿದ್ದಾಗ ಹೆಚ್ಚಿನವರು ತಮ್ಮ ಫೋನ್‌ಗಳಿಗಾಗಿ ತಡಕಾಡುತ್ತಿರುತ್ತಾರೆ ಮತ್ತು ಇದು ತಪ್ಪು. ಅಂತಹವರು ವರ್ಚ್ಯುವಲ್ ಲೋಕದಲ್ಲಿ ತಮ್ಮನ್ನು ನುಸುಳಿಸಿಕೊಳ್ಳುವ ಬದಲು ಹೊರ ಬಂದು ಇತರರೊಂದಿಗೆ ಮಾತುಕತೆ ನಡೆಸುವ ಮೂಲಕ ಮಾನಸಿಕ ಶಾಂತಿಯನ್ನು ಕಂಡುಕೊಳ್ಳುವುದು ಅಗತ್ಯವಾಗುತ್ತದೆ ಎಂದು ವರದಿಯು ಅಭಿಪ್ರಾಯ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News