ಅ.11ರಿಂದ ಅತಿಥಿ ಉಪನ್ಯಾಸರಿಂದ ಅನಿರ್ದಿಷ್ಟಾವಧಿ ಮುಷ್ಕರ

Update: 2019-10-04 18:25 GMT

ಬೆಂಗಳೂರು, ಅ.4: ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕನಿಷ್ಠ 35 ಸಾವಿರ ರೂ.ವೇತನ ಹಾಗೂ ಉದ್ಯೋಗ ಭದ್ರತೆಗೆ ಒತ್ತಾಯಿಸಿ ಅ.11ರಂದು ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಾಗಣ್ಣ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ 412 ಸರಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 15-20 ವರ್ಷಗಳಿಂದ ಕಡಿಮೆ ಗೌರವಧನ ಪಡೆದು ಅಂದಾಜು 10 ಸಾವಿರ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಅತಿಥಿ ಉಪನ್ಯಾಸಕರಿಗೆ ಸರಕಾರ ಮಾಸಿಕ 11 ರಿಂದ 13 ಸಾವಿರ ರೂ. ವೇತನ ನೀಡುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಕನಿಷ್ಠ 35 ಸಾವಿರ ರೂ. ವೇತನ ನೀಡಬೇಕೆಂದು ತಿಳಿಸಿದರು.

ಈ ಹಿಂದಿನ ಸರಕಾರ, ಅತಿಥಿ ಉಪನ್ಯಾಸಕರಿಗೆ ಹೆಚ್ಚಳ ಮಾಡಲು ಉದ್ದೇಶಿಸಿದ್ದ 5 ಸಾವಿರ ರೂ. ಗಳ ಗೌರವ ಧನವನ್ನು ಜುಲೈ ತಿಂಗಳಿಗೆ ಅನ್ವಯವಾಗುವಂತೆ ಬಿಡುಗಡೆ ಮಾಡಬೇಕು. ಯುಜಿಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರಿಗೆ ಒಂದು ಗಂಟೆಗೆ 1,500 ರೂ. ಅಥವಾ ಮಾಸಿಕ 50 ಸಾವಿರ ರೂ. ಗಳನ್ನು ಗೌರವ ಧನವನ್ನಾಗಿ ನೀಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ನೀಡಿರುವ ನಿರ್ದೇಶನವನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಒದಗಿಸಲು ಸೂಕ್ತ ಕಾನೂನು ರೂಪಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಅತಿಥಿ ಉಪನ್ಯಾಸಕರ ಸಂಘಟನೆ ಒಳಗೊಂಡಂತೆ, ಶೀಘ್ರ ಸಭೆ ಕರೆಯಬೇಕು. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವವರೆಗೆ ಅವರನ್ನೇ ಸೇವೆಯಲ್ಲಿ ಮುಂದುವರೆಸಿ, ವರ್ಷದ 12 ತಿಂಗಳೂ ಸಹ ಗೌರವ ಧನ ಪಾವತಿಸಬೇಕೆಂದು ಒತ್ತಾಯಿಸಿದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಸತೀಶ್, ಲಕ್ಷ್ಮಿದೇವಿ, ನಾಗೇಂದ್ರಪ್ಪ, ಶಿವಣ್ಣ, ಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News