ಬೆಂಗಳೂರಿಲ್ಲಿ ಮೂಲಭೂತ ಸೌಲಭ್ಯಕ್ಕೆ ಆದ್ಯತೆ: ಮೇಯರ್ ಗೌತಮ್ ಕುಮಾರ್
ಬೆಂಗಳೂರು, ಅ.4: ನಗರದ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡುವುದು ಹಾಗೂ ಬೆಂಗಳೂರಿನಾದ್ಯಂತ ತ್ಯಾಜ್ಯ ಎಲ್ಲಿಯೂ ಉಳಿಯದಂತೆ ಎಚ್ಚರ ವಹಿಸಲಾಗುವುದು ಎಂದು ನೂತನ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಬಿಬಿಎಂಪಿಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತೇನೆ. ನಗರವನ್ನು ಸಮಸ್ಯೆ ಮುಕ್ತ ನಗರವನ್ನಾಗಿ ಮಾಡುವಲ್ಲಿ ಹಲವು ಯೋಜನೆಗಳನ್ನು ರೂಪಿಸುವುದಾಗಿ ಅವರು ತಿಳಿಸಿದರು.
ನಾಡಪ್ರಭು ಕೆಂಪೇಗೌಡರು ಕಟ್ಟಿದ್ದ ಕನಸನ್ನು ನನಸು ಮಾಡುವಲ್ಲಿ ಶ್ರಮಿಸುತ್ತೇನೆ. ಅವರು ಹಾಕಿಕೊಟ್ಟ ಹಾದಿಯಲ್ಲೇ ಸಾಗಿ ನಗರವನ್ನು ಯೋಜನಾ ಬದ್ಧವಾಗಿ ರೂಪಿಸುತ್ತೇನೆ ಎಂದು ತಿಳಿಸಿದರು. ಇದೇ ನೂತನ ಮೇಯರ್ ಗೌತಮ್ ಕುಮಾರ್‌ಗೆ ಗಣ್ಯರು, ಅಭಿಮಾನಿಗಳು ಹಾಗೂ ಅಧಿಕಾರಿಗಳು ಶುಭ ಕೋರಿದರು.
ರಾಜಕಾಲುವೆ ಅಭಿವೃದ್ಧಿ ಮತ್ತು ಹೂಳೆತ್ತುವ ಹೆಸರಿನಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ.ಹಗರಣವನ್ನು ಟಿವಿಸಿಸಿ ತನಿಖೆಗೆ ಒಪ್ಪಿಸಲಾಗಿದೆ. ಎರಡು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಗೌತಮ್ ಕುಮಾರ್, ಮೇಯರ್, ಬಿಬಿಎಂಪಿ