ಬ್ರಿಟನ್ ವಿರುದ್ಧ ಡ್ರಾ ಸಾಧಿಸಿದ ಭಾರತದ ಮಹಿಳಾ ಹಾಕಿ ತಂಡ

Update: 2019-10-05 02:21 GMT

ಮಾರ್ಲೊ(ಬ್ರಿಟನ್), ಅ.4: ಭಾರತದ ಮಹಿಳಾ ಹಾಕಿ ತಂಡ ಶುಕ್ರವಾರ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಆತಿಥೇಯ ಗ್ರೇಟ್ ಬ್ರಿಟನ್ ವಿರುದ್ದ 2-2 ಅಂತರದಿಂದ ಡ್ರಾ ಸಾಧಿಸಿದೆ.

 ಇಂಗ್ಲೆಂಡ್ ಪ್ರವಾಸದಲ್ಲಿರುವ ವಿಶ್ವದ ನಂ.9ನೇ ತಂಡ ಭಾರತ ಮೂರನೇ ಬಾರಿ ಬ್ರಿಟನ್ ವಿರುದ್ಧ ಡ್ರಾ ಸಾಧಿಸಿತು. ಐದು ಪಂದ್ಯಗಳ ಹಾಕಿ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ಮಹಿಳಾ ತಂಡ 1ರಲ್ಲಿ ಜಯ, ಮೂರರಲ್ಲಿ ಡ್ರಾ ಹಾಗೂ ಇನ್ನೊಂದು ಪಂದ್ಯದಲ್ಲಿ ಸೋಲನುಭವಿಸಿದೆ.

ಕೊನೆಯ ಪಂದ್ಯದಲಿ ನವಜೋತ್ ಕೌರ್ ಭಾರತಕ್ಕೆ ಆರಂಭದಲ್ಲಿ ಮುನ್ನಡೆ ಒದಗಿಸಿಕೊಟ್ಟರು. ಗುರ್ಜಿತ್ ಕೌರ್ 48ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರು. ಕೊನೆಯ ನಿಮಿಷಗಳಲ್ಲಿ ಎರಡು ಗೋಲು ಗಳಿಸಿದ ಗ್ರೇಟ್ ಬ್ರಿಟನ್‌ನ ಎಲಿಝಬೆತ್ ನೀಲ್(55ನೇ ನಿಮಿಷ) ಹಾಗೂ ಅನ್ನಾ ಟೊಮನ್(60ನೇ ನಿ.)ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವಲ್ಲಿ ಪ್ರಮುಖ ಕಾಣಿಕೆ ನೀಡಿದರು.

ಕಳೆದ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಮೊದಲ 10 ನಿಮಿಷಗಳ ಆಟದಲ್ಲಿ ಹಲವು ಅವಕಾಶವನ್ನು ಸೃಷ್ಟಿಸಿದ ಭಾರತ ಆತಿಥೇಯ ಇಂಗ್ಲೆಂಡ್‌ಗೆ ಒತ್ತಡ ಹಾಕಿತು. ಬ್ರಿಟನ್ ಮೇಲೆ ಸತತ ಒತ್ತಡ ಹಾಕಿದ ಭಾರತ 8ನೇ ನಿಮಿಷದಲ್ಲಿ ಗೋಲು ಖಾತೆ ತೆರೆಯಿತು. ನವಜೋತ್ ಕೌರ್ ಗೋಲ್‌ಕೀಪರ್ ಸಬ್ಬಿ ಹೀಶ್‌ರನ್ನು ವಂಚಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಭಾರತ ಮೊದಲ ಕ್ವಾರ್ಟರ್‌ನಲ್ಲಿ ಹಲವು ಬಾರಿ ಮುನ್ನಡೆಯ ಅವಕಾಶ ಪಡೆದಿತ್ತು. ಹಲವು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿಯೂ ವಿಫಲವಾಯಿತು. 2ನೇ ಕ್ವಾರ್ಟರ್‌ನಲ್ಲಿ ಭಾರತದ ಗೋಲ್‌ಕೀಪರ್ ಸವಿತಾ ಎದುರಾಳಿ ತಂಡಕ್ಕೆ ಹಲವು ಗೋಲು ಅವಕಾಶ ನಿರಾಕರಿಸಿದರು. ಭಾರತ ಮೊದಲಾರ್ಧದ ಅಂತ್ಯಕ್ಕೆ 1-0 ಮುನ್ನಡೆ ಕಾಯ್ದುಕೊಂಡಿತು. 48ನೇ ನಿಮಿಷದಲ್ಲಿ ಭಾರತ 2-0 ಮುನ್ನಡೆ ಪಡೆಯಿತು. ಪಂದ್ಯ ಕೊನೆಗೊಳ್ಳಲು ಆರು ನಿಮಿಷ ಬಾಕಿ ಇರುವಾಗ ಎಲಿಝಬೆತ್ ನೀಲ್ 55ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪಂದ್ಯದಲ್ಲಿ ಹೆಚ್ಚಿನ ಸಮಯ ಬ್ರಿಟನ್‌ಗೆ ಒತ್ತಡ ಹೇರಿದ ಭಾರತ ಕೊನೆಯ 5 ನಿಮಿಷದ ಆಟದಲ್ಲಿ ಹೆದರಿದಂತೆ ಕಂಡುಬಂತು. 60ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದ ಅನ್ನಾ ಟೊಮನ್ ಇಂಗ್ಲೆಂಡ್ 2-2 ಅಂತರದಿಂದ ಡ್ರಾ ಸಾಧಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News