ಮಿದುಳಿನ ಚುರುಕುತನ ಹೆಚ್ಚಿಸಿಕೊಳ್ಳಬೇಕೇ?: ಹಾಗಾದರೆ ಈ ಆಟ ಆಡಿ!

Update: 2019-10-05 13:57 GMT

ಚೆಸ್ ಅಥವಾ ಚದುರಂಗ ನಿಮ್ಮ ಬುದ್ಧಿಯನ್ನು ಬಳಸಿಕೊಳ್ಳುವ ಜನಪ್ರಿಯ ಆಟವಾಗಿದ್ದು,ಮಿದುಳಿಗೆ ಅತ್ಯುತ್ತಮ ವ್ಯಾಯಾಮವನ್ನು ನೀಡುತ್ತದೆ. ಈ ಆಟವನ್ನಾಡಲು ತುಂಬ ಬುದ್ಧಿವಂತರೇ ಆಗಿರಬೇಕು ಎಂದೇನಿಲ್ಲ. ಪ್ರತಿದಿನ ಚೆಸ್ ಆಡುವುದರಿಂದ ನಿಮ್ಮ ಬುದ್ಧಿಶಕ್ತಿಯು ಬೆಳೆಯುತ್ತದೆ. ಇತರ ಲಾಭಗಳ ಜೊತೆಗೆ ನಿಮ್ಮ ಐಕ್ಯೂ ಅಥವಾ ಬುದ್ಧಿಮತ್ತೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಚೆಸ್ ಆಟವು ಅದ್ಭುತ ಬದಲಾವಣೆಗಳನ್ನು ತರುತ್ತದೆ. ಮಕ್ಕಳು ಬೆಳೆಯುತ್ತಿರುವಾಗ ಅವರ ಬುದ್ಧಿಯನ್ನು ಹರಿತಗೊಳಿಸಲು ಹೆತ್ತವರು ಅವರಿಗೆ ಚೆಸ್ ಆಡುವಂತೆ ಪ್ರೋತ್ಸಾಹಿಸಬೇಕು. ಸ್ಮಾರ್ಟ್‌ಫೋನ್‌ಗಳಲ್ಲಿ ಸಮಯವನ್ನು ಪೋಲು ಮಾಡುವ ಬದಲು ಒಂದು ಸುತ್ತು ಚೆಸ್ ಆಡುವುದು ಲಾಭದಾಯಕ ಎನ್ನುತ್ತಾರೆ ಮನಃಶಾಸ್ತ್ರಜ್ಞರು.

► ಐಕ್ಯೂ ಹೆಚ್ಚಿಸುತ್ತದೆ

ಕಡಿಮೆ ಐಕ್ಯೂ ಇರುವ ಬಗ್ಗೆ ಚಿಂತೆಯಿರುವವರಿಗೆ ಚೆಸ್ ಅತ್ಯುತ್ತಮ ಪರಿಹಾರವಾಗಿದೆ. ನಿಯಮಿತವಾಗಿ ಚೆಸ್ ಆಡುವುದರಿಂದ ಕಾಲಕ್ರಮೇಣ ಐಕ್ಯೂ ಹೆಚ್ಚಲು ನೆರವಾಗುತ್ತದೆ. 3-4 ತಿಂಗಳುಗಳಲ್ಲಿ ಅರಿವಿನ ಶಕ್ತಿ ಮತ್ತು ಮಿದುಳಿನ ಶಕ್ತಿಯು ಹೆಚ್ಚುತ್ತದೆ. ಚೆಸ್ ಮಿದುಳಿನ ಆಟವಾಗಿದ್ದು,ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಮಾರ್ಗವಾಗಿದೆ. ಅದು ಮಿದುಳನ್ನು ಚುರುಕುಗೊಳಿಸುವ ಜೊತೆಗೆ ಚಿಂತನಾ ಶಕ್ತಿಯನ್ನೂ ಹೆಚ್ಚಿಸುತ್ತದೆ. ನೀವು ಮಿದುಳಿಗೆ ಎಷ್ಟು ಹೆಚ್ಚು ವ್ಯಾಯಾಮವನ್ನು ನೀಡುತ್ತೀರೋ ಅಷ್ಟು ಹೆಚ್ಚು ಬುದ್ಧಿವಂತರಾಗುತ್ತೀರಿ.

► ಚೆಸ್ ಮಿದುಳಿನ ಎರಡೂ ಭಾಗಗಳಿಗೂ ಏಕಕಾಲದಲ್ಲಿ ವ್ಯಾಯಾಮ ನೀಡುತ್ತದೆ

ಚೆಸ್ ನಿಮ್ಮ ಮಿದುಳಿನ ಎರಡೂ ಗೋಳಾರ್ಧಗಳಿಗೆ ಏಕಕಾಲದಲ್ಲಿ ವ್ಯಾಯಾಮವನ್ನು ನೀಡುವ ಏಕೈಕ ಆಟವಾಗಿದೆ. ಬಲ ಗೋಳಾರ್ಧವು ಮಾದರಿ ಗುರುತಿಸುವಿಕೆಯ ಮತ್ತು ಎಡ ಗೋಳಾರ್ಧ ವಸ್ತು ಗುರುತಿಸು ವಿಕೆಯ ಪಾತ್ರವನ್ನು ನಿರ್ವಹಿಸುತ್ತವೆ. ಚೆಸ್ ಆಟವು ಎರಡೂ ಭಾಗಗಳ ಅರಿವಿನ ಶಕ್ತಿಯನ್ನು ಹೆಚ್ಚಿಸುತ್ತದೆ.

► ಮಾನಸಿಕ ಅಸ್ವಾಸ್ಥವನ್ನು ದೂರವಿರಿಸುತ್ತದೆ

ಅಲ್ಝೈಮರ್ಸ್ ಮತ್ತು ಬುದ್ಧಿಮಾಂದ್ಯತೆಯಂಹ ರೋಗಗಳು ಇಂದು ಸಾಮಾನ್ಯವಾಗಿವೆ. ಇಂತಹ ರೋಗಗಳಿಗೆ ಬಲಿಪಶುವಾಗದಿರಲು ನೀವು ಬಯಸಿದ್ದರೆ ಪ್ರತಿದಿನ ಚೆಸ್ ಆಡಿ. ಅದು ಮಿದುಳಿನ ಜೀವಕೋಶಗಳಿಗೆ ಹಾನಿಯನ್ನು ತಡೆಯುವ ಮೂಲಕ ಅದನ್ನು ಆರೋಗ್ಯಯುತವಾಗಿರಿಸುತ್ತದೆ. ಸ್ಕಿರೊಫ್ರೇನಿಯಾದಿಂದ ಬಳಲುತ್ತಿರುವ ರೋಗಿಗಳ ಆರೋಗ್ಯ ಪ್ರತಿದಿನ ಚೆಸ್ ಆಟದ ಮೂಲಕ ಸುಧಾರಣೆಯಾಗಿರುವುದು ಕಂಡು ಬಂದಿದೆ.

► ರಚನಾತ್ಮಕತೆಯನ್ನು ಹೆಚ್ಚಿಸುತ್ತದೆ

ಚೆಸ್ ನೀವು ರಚನಾತ್ಮಕವಾಗಿ ಯೋಚಿಸುವುದನ್ನು ಅಗತ್ಯವಾಗಿಸುತ್ತದೆ. ಆಟದಲ್ಲಿ ಸರಿಯಾದ ಚಲನೆಗಾಗಿ ನೀವು ಸರಿಯಾದ ದಿಕ್ಕಿನಲ್ಲಿ ನಿಮ್ಮ ಮಿದುಳನ್ನು ಉಪಯೋಗಿಸಬೇಕಾಗುತ್ತದೆ. ಈ ರೀತಿಯಲ್ಲಿ ನಿಮ್ಮ ರಚನಾತ್ಮಕತೆಯು ಹೆಚ್ಚುತ್ತದೆ ಮತ್ತು ನೀವು ಧನಾತ್ಮಕವಾಗಿ ಯೋಚಿಸಲು ಆರಂಭಿಸುತ್ತೀರಿ. ಈ ಅಭ್ಯಾಸವನ್ನು ಬೆಳೆಸಿಕೊಂಡರೆ ನಿಮ್ಮ ಹಲವಾರು ಒತ್ತಡಗಳು ಮಾಯವಾಗುತ್ತವೆ. ನೀವು ಜೀವನದಲ್ಲಿ ಹೊಸ ವಿಷಯಗಳನ್ನು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು ಆರಂಭಿಸುತ್ತೀರಿ.

► ಮಕ್ಕಳ ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ

ತಮ್ಮ ಎಳವೆಯಲ್ಲಿಯೇ ಚೆಸ್ ಆಟದಲ್ಲಿ ತೊಡಗಿಸಿಕೊಂಡ ಮಕ್ಕಳು ಅತ್ಯಂತ ಚುರುಕುಮತಿಯನ್ನು ತಮ್ಮದಾಗಿಸಿಕೊಳ್ಳುವ ಹೆಚ್ಚಿನ ಸಾಧ್ಯತೆಗಳಿವೆ. ಅವರು ತಮ್ಮ ವಿದ್ಯಾಭ್ಯಾಸದಲ್ಲಿ ಮತ್ತು ಸಹ ಪಠ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ. ಚೆಸ್ ಆಡುವುದರಿಂದ ಮಕ್ಕಳಲ್ಲಿ ಸಮಸ್ಯೆಗಳನ್ನು ಬಿಡಿಸುವ ಮತ್ತು ಆಲೋಚನಾ ಸಾಮರ್ಥ್ಯಗಳನ್ನು ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ಸಾಬೀತುಗೊಳಿಸಿದೆ. ಹೆತ್ತವರು ತಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಚೆಸ್ ಆಡಲು ಕಲಿಸಬೇಕು.

► ಚೆಸ್ ಆಟ ಅತ್ಯುತ್ತಮ ಚಿಕಿತ್ಸೆ

ಆಟಿಸಮ್‌ನಂತಹ ಬೆಳವಣಿಗೆಯನ್ನು ಕುಂಠಿತಗೊಳಿಸುವ ಕಾಯಿಲೆಗಳಿಂದ ನರಳುತ್ತಿರುವವರಿಗೆ ಚೆಸ್ ಆಟವು ಲಾಭದಾಯಕವಾಗಿದೆ. ಗಂಭೀರ ಅಪಘಾತಗಳ ಗಾಯಾಳುಗಳು ಅಥವಾ ಪಾರ್ಶ್ವವಾಯು ರೋಗಿಗಳು ಸಹ ವಾರಗಳ ಕಾಲ ಪ್ರತಿ ದಿನ ಚೆಸ್ ಆಡಿ ಚೇತರಿಸಿಕೊಂಡಿರುವ ನಿದರ್ಶನಗಳಿವೆ. ನೀವು ಚೆಸ್ ಆಡುತ್ತಿರುವಾಗ ಗೆಲ್ಲಲು ಮಾನಸಿಕ ಮತ್ತು ದೈಹಿಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹೀಗೆ ಈ ಆಟವು ರೋಗಿಗಳಲ್ಲಿ ಅರಿವನ್ನು ಮತ್ತು ಏಕಾಗ್ರತೆಯನ್ನು ಪ್ರಚೋದಿಸುತ್ತದೆ ಮತ್ತು ಅವರು ತ್ವರಿತವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News