ಕೇಂದ್ರದ ಪರಿಹಾರ ಸದ್ಯಕ್ಕೆ ಉಸಿರಾಡಲು ಸಾಕು: ಶಾಸಕ ಎಸ್.ಆರ್.ವಿಶ್ವನಾಥ್

Update: 2019-10-05 14:05 GMT

ಬೆಂಗಳೂರು, ಅ. 5: ರಾಜ್ಯದ ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 1,200 ಕೋಟಿ ರೂ.ಅನುದಾನ ಸದ್ಯಕ್ಕೆ ಉಸಿರಾಡಲು ಸಾಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ದೊರೆಯುವ ವಿಶ್ವಾಸವಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ನೆರೆ ಸಂತ್ರಸ್ತರಿಗೆ ನೆರವಿಗೆ ಕೇಂದ್ರ ಸರಕಾರ ಸೂಕ್ತ ಸಮಯಕ್ಕೆ ಹಣ ನೀಡಿಲ್ಲ ಎಂದು ಟೀಕೆ ವ್ಯಕ್ತವಾಗಿತ್ತು. ಆದರೆ, ಇದೀಗ ಕೇಂದ್ರ ಸರಕಾರ ಹೆಚ್ಚಿನ ನೆರವು ನೀಡಿದೆ ಎಂದರು.

ಪ್ರಧಾನಿ ಮೋದಿ ಒಡಿಶ್ಶಾ, ಬಿಹಾರ ಪ್ರವಾಹ ಸಂಬಂಧ ಟ್ವೀಟ್ ಮಾಡಿ ಸಾಂತ್ವನ ಹೇಳಿದ್ದರು. ಆದರೆ, ಕರ್ನಾಟಕಕ್ಕೆ ಕನಿಷ್ಠ ಸಾಂತ್ವನ ಹೇಳಲಿಲ್ಲ ಎಂದು ಆರೋಪವೂ ಕೇಳಿಬಂದಿತ್ತು. ಇದೀಗ ನೆರವು ನೀಡಿದ್ದು, ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ವಿಶ್ವನಾಥ್ ಹೇಳಿದರು.

ಪ್ರಧಾನಿ ಮೋದಿ ದೇಶದ ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡಿಲ್ಲ. ನೆರೆ ಸಂತ್ರಸ್ತರಿಗೆ ನೆರವು ಕಲ್ಪಿಸುವ ದೃಷ್ಟಿಯಿಂದ ಆ ಭಾಗದ ಸಚಿವರು, ಶಾಸಕರು ನೆರೆ ಪೀಡಿತ ಪ್ರದೇಶಗಳಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕು. ಇದರಿಂದ ಸಮಸ್ಯೆಗಳು ಅರಿವಿಗೆ ಬರಲಿದ್ದು, ಪರಿಹಾರ ಸುಲಭವಾಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News