ರೌಡಿ ಕುಟುಂಬಕ್ಕೆ ಬೆದರಿಕೆ: ಆರೋಪಿಗಳ ಬಂಧನ

Update: 2019-10-05 14:06 GMT

ಬೆಂಗಳೂರು, ಅ.5: ರೌಡಿ ಪ್ರಮೋದ್ ಯಾನೆ ರಿಯಾಬ್ ಅವರ ಕುಟುಂಬದವರಿಗೆ ಪ್ರಾಣ ಬೆದರಿಕೆ ಹಾಕಿರುವ ಆರೋಪದಡಿ ಆರೋಪಿಗಳನ್ನು ಇಲ್ಲಿನ ಸುಬ್ರಮಣ್ಯ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚೌಡೇಶ್ವರಿ ನಗರದ ಅಭಿಷೇಕ್(21), ಕುರುಬರ ಹಳ್ಳಿಯ ಸುನಿಲ್‌ಸೇಟಪ್ಪ(22), ಮಾರೇನಹಳ್ಳಿಯ ಪ್ರವೀಣ್(20), ಮಧುಕುಮಾರ್(20), ರಾಜಾಜಿನಗರದ ನವೀನ್(23) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ, ಕೊಲೆ ಯತ್ನ, ಸುಲಿಗೆ, ಬೆದರಿಕೆ, ಇನ್ನಿತರ 20ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಅಶೋಕ, ನ್ಯಾಯಾಂಗ ಬಂಧನದ ಮೇಲೆ ಜೈಲಿನಲ್ಲಿದ್ದಾನೆ. ಮತ್ತೊಬ್ಬ ರೌಡಿ ಪ್ರಮೋದ್ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದಾನೆ. ಶಿಕ್ಷೆ ಅನುಭವಿಸುವ ವೇಳೆ ಇವರಿಬ್ಬರ ನಡುವೆ ಮೊಬೈಲ್ ವಿಚಾರಕ್ಕೆ ಜಗಳವಾಗಿದ್ದು, ಇಬ್ಬರು ಪರಸ್ಪರ ಹಲ್ಲೆ ಮಾಡಿಕೊಂಡಿರುತ್ತಾರೆ. ಇದೇ ದ್ವೇಷಕ್ಕೆ ರೌಡಿ ಪ್ರಮೋದ್‌ನನ್ನು ಬಿಟ್ಟರೆ ಸರಿ ಹೋಗುವುದಿಲ್ಲ ಎಂಬ ಕಾರಣಕ್ಕೆ ಜೈಲಿನಲ್ಲಿದ್ದು ತನ್ನ ಸಹಚರರ ಮೂಲಕ ಪ್ರಮೋದ್ ಕುಟುಂಬದವರಿಗೆ ಬೆದರಿಕೆ ಹಾಕಿಸಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

ರೌಡಿ ಅಶೋಕ್‌ನ ಬಂಧಿತ ಸಹಚರರೂ ಸೇರಿ ಆರೇಳು ಮಂದಿ ಕಳೆದ ಸೆ. 24 ರಂದು ರಾತ್ರಿ ರಾಜಾಜಿನಗರದ 2ನೆ ಹಂತದ ಮನೆಯಲ್ಲಿ ರಿಯಾಬ್‌ನ ತಂದೆ ಕೇಶವ ಹಾಗೂ ತಾಯಿ ಶಾರದಾ ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಕೇಶವ್ ಅವರು ನೀಡಿದ್ದ ದೂರನ್ನಾಧರಿಸಿ ಕಾರ್ಯಾಚರಣೆ ಕೈಗೊಂಡು ಸುಬ್ರಮಣ್ಯ ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News