ನಕಲಿ ಆರ್ಯುವೇದಿಕ್ ಔಷಧಿ ಮಾರಾಟ ಆರೋಪ: ಐವರ ಬಂಧನ, 6.40 ಲಕ್ಷ ರೂ. ಜಪ್ತಿ
ಬೆಂಗಳೂರು, ಅ.5: ವಯೋವೃದ್ಧರನ್ನು ಗುರಿಯಾಗಿಸಿಕೊಂಡು ನಕಲಿ ಆರ್ಯುವೇದಿಕ್ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಐವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 6.40 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ಗೋಕಾಕ್ ತಾಲೂಕಿನ ಅಂಬೇಡ್ಕರ್ ನಗರ ನಿವಾಸಿಗಳಾದ ವಿರೂಪಾಕ್ಷಪ್ಪ, ಸಂತೋಷ್, ದೀಪಕ್ ಹಾಗೂ ವಿನಾಯಕ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ವಿಲ್ಸನ್‌ಗಾರ್ಡನ್ ವ್ಯಾಪ್ತಿಯಲ್ಲಿ ಸಿದ್ದಿ ಆರ್ಯುವೇದಿಕ್ ಮೆಡಿಸನ್ ಎಂಬ ಅಂಗಡಿಯೊಂದನ್ನು ಆರಂಭಿಸಿದ ಆರೋಪಿಗಳು, ಪಾರ್ಕ್ ಮತ್ತು ವಾಯು ವಿವಾಹರಕ್ಕೆ ತೆರಳುವ ವಯೋವೃದ್ಧರನ್ನು ಗುರಿಯಾಗಿಸಿಕೊಂಡು ಮಧುಮೇಹ, ಬಿಪಿ ಸೇರಿದಂತೆ ಇನ್ನಿತರೆ ಕಾಯಿಲೆಗಳನ್ನು ಗುಣಪಡಿಸಲಾಗುವುದೆಂದು ನಂಬಿಸಿ, ಲಕ್ಷಾಂತರ ರೂಪಾಯಿಗಳನ್ನು ಔಷಧಿಗಳ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳಾದ ರಾಮಮೂರ್ತಿ, ಮಹೇಶ್, ಆನಂದ್ ಎಂಬುವರು ತಲೆಮರೆಸಿಕೊಂಡಿದ್ದು, ಬಂಧಿತರಿಂದ 6.40 ಲಕ್ಷ ರೂ. ನಗದು, ಐದು ಮೊಬೈಲ್, 8 ಚೆಕ್‌ಗಳನ್ನು ಜಪ್ತಿ ಮಾಡಿ, ಇಲ್ಲಿನ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.