ರಾಜ್ಯ, ಕೇಂದ್ರ ಸರಕಾರದಿಂದ ಜನರ ನಿರೀಕ್ಷೆಯಂತೆ ನೆರೆ ಪರಿಹಾರ ಕಾರ್ಯ: ನಳೀನ್ ಕಟೀಲ್

Update: 2019-10-05 15:02 GMT

ಬೆಂಗಳೂರು, ಅ.5: ರಾಜ್ಯ ಹಾಗೂ ಕೇಂದ್ರ ಸರಕಾರ ಎರಡೂ ಸೇರಿ ನೆರೆ ಪೀಡಿತ ಪ್ರದೇಶಗಳ ಜನರ ನಿರೀಕ್ಷೆಯಂತೆ ಪರಿಹಾರ ಕಾರ್ಯಗಳನ್ನು ಕೈಗೊಂಡಿವೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ ಎಂದರು.

ಈ ಹಿಂದಿನ ಸರಕಾರದಲ್ಲಿ ನೆರೆ ಪೀಡಿತ ಜಿಲ್ಲೆಗಳಲ್ಲಿ ಹಾನಿಗೀಡಾದ ಮನೆಗಳ ನಿರ್ಮಾಣಕ್ಕೆ ನಿಗದಿಯಾದ ಹಣವೇ ಬಿಡುಗಡೆ ಆಗದ ನಿದರ್ಶನಗಳಿವೆ. ಆದರೆ, ಈಗ ಸಂಪೂರ್ಣ ಹಾನಿಗೀಡಾದ ಮನೆಗಳ ಮರು ನಿರ್ಮಾಣಕ್ಕೆ 5 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಂತ್ರಸ್ತರ ನೆರವಿಗೆ ತಕ್ಷಣ ತಲಾ 10 ಸಾವಿರ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಮನೆ ಕಳೆದುಕೊಂಡವರು ಪರ್ಯಾಯ ವ್ಯವಸ್ಥೆ ಆಗುವವರೆಗೂ ನಿರಾಶ್ರಿತರ ಕೇಂದ್ರದಲ್ಲಿ ಇರುವಂತಾಗದೇ ಬಾಡಿಗೆ ಮನೆಯಲ್ಲಿ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸೂಚನೆ ನೀಡಲಾಗಿದ್ದು, ಪ್ರತಿ ತಿಂಗಳು ತಲಾ 5 ಸಾವಿರ ರೂ.ಗಳ ಬಾಡಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

ನೆರೆ ಸಂತ್ರಸ್ತರ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ. ಈ ರೀತಿ ನಾಲ್ಕು ಲಕ್ಷ ಸಂತ್ರಸ್ತರಿಗೆ 100 ಕೋಟಿ ರೂ.ಗಳನ್ನು ನೇರವಾಗಿ ಅವರವರ ಖಾತೆಗಳಿಗೆ ಜಮೆ ಮಾಡಲಾಗಿದೆ. ಹಾನಿಗೀಡಾದ ಸಂಪೂರ್ಣ ಕೃಷಿ ಜಮೀನಿಗೆ ಪರ್ಯಾಯವಾಗಿ ಬೇರೆಡೆ ಭೂಮಿ ಒದಗಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಇದಕ್ಕಾಗಿ 350 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಸೆ.21ರಂದು ನೆರೆ ಪರಿಹಾರಕ್ಕಾಗಿ ರಾಜ್ಯ ಸರಕಾರ ಒಂದು ಸಾವಿರ ಕೋಟಿ ರೂ., ಸೆ. 26ರಂದು 500 ಕೋಟಿ ರೂ.ಗಳನ್ನು ಲೋಕೋಪಯೋಗಿ ಮತ್ತು ಕಂದಾಯ ಇಲಾಖೆಯಿಂದ ರಸ್ತೆಗಳ ದುರಸ್ತಿಗಾಗಿ ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಎಸ್ಸಿ ಮತ್ತು ಎಸ್ಟಿ ವಿಶೇಷ ಉಪಯೋಜನೆಗಳಿಗಾಗಿ 1150ಕೋಟಿ ರೂ.ಗಳನ್ನು ದಲಿತ ಕಾಲನಿಗಳಲ್ಲಿ ನಾಶವಾದ ಮನೆಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಕೇಂದ್ರದಿಂದ ಈಗ 1200 ಕೋಟಿ ರೂ.ಗಳ ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ. ಈ ಹಣದ ಬಳಕೆ ಕುರಿತು ಪ್ರಮಾಣಪತ್ರ ಸಲ್ಲಿಕೆ ನಂತರ ಎರಡನೇ ಹಂತದ ಹಣ ಬಿಡುಗಡೆಯಾಗುತ್ತದೆ. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ಸಕ್ರಿಯಗೊಳಿಸಿದೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

ಗೃಹ ಸಚಿವರು ಹಾಗೂ ಹಣಕಾಸು ಸಚಿವರು ವೈಮಾನಿಕ ಸಮೀಕ್ಷೆ ನಡೆಸಿ, ಕ್ರಮಬದ್ಧವಾಗಿ 1200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಕೇಂದ್ರ ಸಚಿವರಿಗೆ ಧನ್ಯವಾದಗಳು. ರಾಜ್ಯದಲ್ಲಿ ನೆರೆ ಪರಿಹಾರ ಹಣ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿಲ್ಲ. ರಾಜ್ಯ ಸರಕಾರ ಈಗಾಗಲೇ 3 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.

ಸರಕಾರದಿಂದ ಅನುದಾನ ಬಿಡುಗಡೆ ಮಾಡಲು ಸರಕಾರದ್ದೇ ನಿಯಮಾವಳಿಗಳು ಇರುತ್ತವೆ. ಭ್ರಷ್ಟಾಚಾರವನ್ನು ತಪ್ಪಿಸುವ ಉದ್ದೇಶದಿಂದ ನಿಯಮಾವಳಿ ರೂಪಿಸಲಾಗಿದೆ. ಅದರಂತೆ, ರಾಜ್ಯಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ. 13 ರಾಜ್ಯಗಳಲ್ಲಿ ತೀವ್ರತರವಾದ ಹಾನಿಯುಂಟಾಗಿದ್ದು, ಆ ರಾಜ್ಯಗಳಲ್ಲಿ ತಂಡದ ಭೇಟಿಯ ನಂತರ ಪರಿಹಾರ ಬಿಡುಗಡೆಯಾಗುತ್ತಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.

ಮುಖ್ಯಮಂತ್ರಿಯಾಗಲಿ, ವಿಜಯೇಂದ್ರ ಅವರಾಗಲಿ ರಾಜ್ಯದ ಖಜಾನೆ ಲೂಟಿಯಾಗಿದೆ ಎಂದು ಹೇಳಿದ್ದಾರೆಯೇ ಹೊರತು ಖಾಲಿಯಾಗಿದೆ ಎಂದು ಹೇಳಿಲ್ಲ. ಮುಖ್ಯಮಂತ್ರಿ ಈಗ ತೆರಿಗೆ ಸಂಗ್ರಹದ ಮೂಲಕ ಹಣಕಾಸು ವ್ಯವಸ್ಥೆ ಮಾಡಿ ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಿದ್ದಾರೆ. ಇಲ್ಲವಾದರೆ 3 ಸಾವಿರ ಕೋಟಿ ರೂ.ಗಳನ್ನು ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಲು ಸಾಧ್ಯವಿರಲಿಲ್ಲ.

-ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News