ನೆರೆ ಪರಿಹಾರ: ರಾಜ್ಯದ ವರದಿಯನ್ನು ಕೇಂದ್ರ ತಿರಸ್ಕರಿಸಿಲ್ಲ- ಆರ್.ಅಶೋಕ್

Update: 2019-10-05 16:23 GMT

ಬೆಂಗಳೂರು, ಅ.5: ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನಮ್ಮ ವರದಿಯನ್ನು ತಿರಸ್ಕರಿಸಿಲ್ಲ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 1200 ಕೋಟಿ ರೂ.ಗಳ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಬೆಳೆಹಾನಿ, ಭೂಕುಸಿತ, ಮನೆ ಕುಸಿತಕ್ಕೆ ಪರಿಹಾರ ಘೋಷಿಸಲಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದರು.

ಈವರೆಗೆ ಜಿಲ್ಲಾಧಿಕಾರಿಗಳ ಖಾತೆಗೆ 417.63 ಕೋಟಿ ರೂ.ಗಳನ್ನು ರಾಜ್ಯ ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ವಸತಿ ಇಲಾಖೆಗೆ 1,160 ಕೋಟಿ ರೂ. ಬಿಡುಗಡೆಯಾಗಿದೆ. ಶೇ.70ರಷ್ಟು ಪರಿಹಾರ ಸಂತ್ರಸ್ತರ ಕೈ ಸೇರಿದೆ. ಮೂಲ ಸೌಕರ್ಯಕ್ಕೆ 500 ಕೋಟಿ ರೂ.ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.

ಮನೆ ಇಲ್ಲದವರಿಗೆ ಹೊಸದಾಗಿ ಮನೆ ಕಟ್ಟಿಸಿಕೊಡುವ ಕೆಲಸ ಆಗಬೇಕಿದೆ. ಮನೆ ಕಟ್ಟುವ ಮುಂಚೆ 2 ಲಕ್ಷ ರೂ.ನೀಡುತ್ತೇವೆ. ಆನಂತರ ಹಂತಹಂತವಾಗಿ ಬಾಕಿ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.

ಭೂ ಕುಸಿತವಾದ ಜಮೀನನ್ನು ಸರಕಾರದ ವಶಕ್ಕೆ ಪಡೆಯುವ ಘೋಷಣೆ ಮಾಡುತ್ತೇವೆ. ಇದಕ್ಕೆ ಪರ್ಯಾಯವಾಗಿ ಅದೇ ಭಾಗದಲ್ಲಿ ಅಷ್ಟೇ ಪ್ರಮಾಣದ ಜಮೀನನ್ನು ರೈತರಿಗೆ ನೀಡಲು ಉದ್ದೇಶಿಸಲಾಗಿದೆ. ಸಂಪೂರ್ಣ ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ ರೂ. ನೀಡುತ್ತೇವೆ ಎಂದು ಅವರು ತಿಳಿಸಿದರು.

ಲೋಕೋಪಯೋಗಿ ರಸ್ತೆಗಳ ದುರಸ್ತಿಗೆ 500 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ರಾಜ್ಯದಿಂದ ನೆರೆ ಪರಿಹಾರಕ್ಕೆ 2577.93 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಅಶೋಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News