ಉನ್ನತ ಶಿಕ್ಷಣದಲ್ಲಿ ‘ಪ್ರಾಯೋಗಿಕ ಪರೀಕ್ಷೆ’ ವಿಸ್ತರಣೆ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2019-10-05 16:31 GMT

ಬೆಂಗಳೂರು, ಅ.5: ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವ ನಿಟ್ಟಿನಲ್ಲಿ ಉನ್ನತ ಶಿಕ್ಷಣದಲ್ಲಿ ‘ಪ್ರಾಯೋಗಿಕ ಪರೀಕ್ಷೆ’ಗಳನ್ನು ವಿಸ್ತರಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದರು.

ಶನಿವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕ್ಯಾಂಪಸ್ ಟು ಕಮ್ಯೂನಿಟಿ ಏರ್ಪಡಿಸಿದ್ದ, ಸ್ಕೂಲ್ ಬೆಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಶಿಕ್ಷಣ ಪಡೆದರೆ ಸಾಲದು. ಬದಲಾಗಿ, ಸಮಾಜಕ್ಕೂ ಅವರು ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರಾಯೋಗಿಕ ಚಟುವಟಿಕೆಗಳನ್ನು ಹೆಚ್ಚಿಸಲಾಗುವುದು ಎಂದರು.

ನಮ್ಮಲ್ಲಿ ಅಕಾಡೆಮಿ ಮತ್ತು ಅಂಕಗಳ ಆಧಾರದ ಮೇಲೆ ಕಾಲೇಜುಗಳಿಗೆ ಪ್ರವೇಶ ನೀಡುವ ಪದ್ಧತಿ ಚಾಲ್ತಿಯಲ್ಲಿದೆ. ಆದರೆ, ವಿದೇಶಗಳಲ್ಲಿ ಹಾಗಿಲ್ಲ, ಬದಲಾಗಿ, ಶಿಕ್ಷಣದಿಂದ ಸಮಾಜದ ಬದಲಾವಣೆ ಹೇಗೆ ಮಾಡಲಾಗುತ್ತದೆ ಎನ್ನುವುದು ಸಂಶೋಧನೆ ನಡೆಸಿ, ವರದಿ ಸಲ್ಲಿಸಬೇಕಾಗಿದೆ. ಈ ಮಾದರಿಯ ವ್ಯವಸ್ಥೆ ನಮ್ಮಲ್ಲಿಯೂ ಬರಬೇಕು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ತಮ್ಮಲ್ಲಿರುವ ಜಡತ್ವ ಬಿಡುವ ಮೂಲಕ ಕ್ರಿಯಾಶೀಲತೆಯಿಂದ ನಾನಾ ನೆಲೆಗಳಲ್ಲಿ ಅಧ್ಯಯನಶೀಲರಾಗಬೇಕು. ಇದರ ಅನುಸರಣೆಯಿಂದ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಸ್ಕೃತಿ, ಕ್ರೀಡೆ, ಆಧ್ಯಾತ್ಮಿಕ ಸೇರಿದಂತೆ ಹಲವು ವಿಚಾರಗಳಿವೆ. ಇದು ಜಾರಿಗೆ ಬಂದರೆ, ವಿದ್ಯಾರ್ಥಿಗಳಿಗೆ ಅನುಕೂಲವೇ ಹೆಚ್ಚು ಎಂದು ಹೇಳಿದರು.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ಸರಕಾರಿ ಶಾಲೆಗಳ ವಾತಾವರಣ, ಮೂಲಸೌಕರ್ಯ ಬದಲಾವಣೆ ಆಗಬೇಕು ಎನ್ನುವುದು ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಅದೇರೀತಿ, ಸ್ವಚ್ಛತೆಗೂ ಅವರು ಆದ್ಯತೆ ನೀಡಿದ್ದರು. ಹಾಗಾಗಿ, ಅವರ ಕನಸು ಮತ್ತು ಗುರಿಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬರಹಗಾರ ಡಾ.ಬಿ.ವಿ.ವಸಂತಕುಮಾರ್, ಎನ್‌ಎಸ್‌ಎಸ್ ರಾಜ್ಯ ಅಧಿಕಾರಿ ಡಾ.ಗಂಗನಾಥ್ ಶೆಟ್ಟಿ, ಸಂಗೀತಾ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News