ಎರಡು ದಿನ ಮೊದಲೇ ಶಕ್ತಿ ಕೇಂದ್ರದಲ್ಲಿ ಹಬ್ಬದ ಕಳೆ
Update: 2019-10-05 22:47 IST
ಬೆಂಗಳೂರು, ಅ. 5: ಸರಣಿ ರಜೆ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಶನಿವಾರವೇ ಸಚಿವರ ಕೊಠಡಿ, ಕಚೇರಿಗಳನ್ನು ತಳಿರು, ತೋರಣ, ವಿವಿಧ ಹೂವುಗಳಿಂದ ಸಿಂಗರಿಸಿ ಪೂಜೆ ನೆರವೇರಿಸಿದರು.
ರವಿವಾರ ರಜೆ, ಸೋಮವಾರ ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಹಿನ್ನೆಲೆಯಲ್ಲಿ ಸರಣಿ ರಜೆ ಹಿನ್ನೆಲೆಯಲ್ಲಿ ಎರಡು ದಿನ ಮೊದಲೇ ವಿಧಾನಸೌಧದಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ವಿಧಾನಸೌಧ, ವಿಕಾಸಸೌಧದ ಸಿಬ್ಬಂದಿ ತಮ್ಮ ಕಚೇರಿಗಳನ್ನು ಸಿಂಗಾರ ಮಾಡುವುದರಲ್ಲಿ ತೊಡಗಿದ್ದರು.
ವಿಧಾನಸೌಧದ ಕಾರಿಡಾರ್‌ಗಳಲ್ಲಿ ಮಹಿಳಾ ಸಿಬ್ಬಂದಿ ಬಣ್ಣ-ಬಣ್ಣದ ರಂಗೋಲಿ ಹಾಕುತ್ತಿದ್ದರೆ, ಪುರುಷ ಸಿಬ್ಬಂದಿ ತಳಿರು-ತೋರಣ, ಹೂವುಗಳಿಂದ ಕಚೇರಿಯನ್ನು ಅಲಂಕರಿಸಿ ಬೂದುಗುಂಬಳ ಒಡೆದು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಹೀಗಾಗಿ ಶಕ್ತಿಕೇಂದ್ರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.