ಪ್ರಮುಖ ರಸ್ತೆಗಳಲ್ಲಿ ಬಸ್‌ ಲೇನ್ ನಿರ್ಮಾಣಕ್ಕೆ ಚಿಂತನೆ: ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

Update: 2019-10-05 17:28 GMT

ಬೆಂಗಳೂರು, ಅ.5: ನಗರದಲ್ಲಿ ವಾಹನ ದಟ್ಟಣೆ ಅಧಿಕವಿರುವ ರಸ್ತೆಗಳಲ್ಲಿ ಬಸ್ ಲೇನ್ ನಿರ್ಮಿಸಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.

ಅತಿಹೆಚ್ಚು ಸಂಚಾರ ದಟ್ಟಣೆಯಿರುವ ಪ್ರದೇಶಗಳಲ್ಲಿ 30 ಕಿ.ಮೀ. ಉದ್ದದ ಬಸ್‌ಲೇನ್ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಎಂಟಿಸಿ, ಬೆಸ್ಕಾಂ, ಡಲ್ಟ್, ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತಿತರ ಅಧಿಕಾರಿಗಳೊಂದಿಗೆ ಬಸ್‌ಲೇನ್ ನಿರ್ಮಾಣದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ನಗರದಲ್ಲಿ ಬಸ್‌ಗಳು ಅಡ್ಡಾದಿಡ್ಡಿ ಸಂಚಾರ ಮಾಡುವುದರಿಂದ ವಾಹನ ದಟ್ಟಣೆ ಅಧಿಕವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅತಿ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ಬಸ್ ಲೇನ್ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು.

ನವೆಂಬರ್ 1 ರೊಳಗೆ ಅಗತ್ಯ ಪೂರ್ವಭಾವಿ ಕಾರ್ಯಗಳನ್ನು ಪೂರ್ಣಗೊಳಿಸಿ ನಂತರ ಬಸ್‌ಲೇನ್ ನಿರ್ಮಾಣ ಕಾಮಗಾರಿಯನ್ನು ಆರಂಭ ಮಾಡಲಾಗುವುದು. ಇದರ ಜತೆಗೆ ಶುಚಿತ್ವವಿಲ್ಲದ ಕೆಲವು ಪ್ರಮುಖ ಸ್ಥಳಗಳನ್ನು ಶುಚಿಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಬ್ರಿಗೇಡ್‌ರಸ್ತೆಯ ಅಂದಕ್ಕೆ ಮಾರಕವಾಗಿದ್ದ ಕೆಲ ಸ್ಥಳಗಳನ್ನು ಬಿಬಿಎಂಪಿಯ ಸಿಬ್ಬಂದಿ ಶುಚಿಗೊಳಿಸಿದ್ದಾರೆ. ಅದೇ ರೀತಿ ನಗರದಾದ್ಯಂತ ಶುಚಿತ್ವವಿಲ್ಲದ ಸ್ಥಳಗಳನ್ನು ಗುರುತಿಸಿ, ಸ್ವಚ್ಛ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅನಿಲ್ ಕುಮಾರ್ ಮಾಹಿತಿ ನೀಡಿದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News