ತಲೆ ತಿನ್ನುವವರು

Update: 2019-10-05 18:21 GMT

ಮಾನವ ಸಂಘಜೀವಿ. ಅವನಿಗೆಮಾತನಾಡಲು ಬರುತ್ತದೆ. ತನ್ನ ಮನದ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಲ್ಲ ಎನ್ನುವ ಕಾರಣ ದಿಂದಲೇ ಅವನು ಇತರ ಜೀವಿಗಳಿಗಿಂತ ಭಿನ್ನನಾಗಿ ಗುರುತಿಸಿಕೊ ಳ್ಳುತ್ತಾನೆ. ಹಾಗಾಗಿ ಅವನು ಜೀವಿಗಳಲ್ಲಿಯೇ ಶ್ರೇಷ್ಠನಾಗಿ ಪರಿಗಣಿಸಲ್ಪಡುತ್ತಾನೆ. ಮಾತನಾಡಲು ಬರುತ್ತದೆ ಎನ್ನುವ ಕಾರಣದಿಂದಾಗಿ ಮಾತನಾಡುವ ರೀತಿಯಲ್ಲಿಯೂ ಅನೇಕ ರೀತಿಯ ಜನರು ಕಂಡು ಬರುತ್ತಾರೆ. ಅಂತಹ ಅನೇಕ ರೀತಿಯ ಜನರಲ್ಲಿ ತಲೆ ತಿನ್ನುವ ಗುಣದವರು ಕೂಡಾ ಕೆಲವರು. ನಾನು ಅನೇಕ ಬಾರಿ ಯೋಚಿಸಿದ್ದೇನೆ. ಅದರೆ ಇದುವರೆಗೂ ನನ್ನಲ್ಲಿ ಮೂಡಿದ ಪ್ರಶ್ನೆಗೆ ಉತ್ತರ ನನಗೆ ಸಿಕ್ಕಿಲ್ಲ. ನನ್ನಂತೆ ಈ ರೀತಿ ವಿಚಾರಿಸಿ ಕೆಲವರು ಸೋತು ಹೋಗಿರಬಹುದು. ಎಲ್ಲರೂ ಒಂದಲ್ಲ ಒಂದು ವೇಳೆ ಇಂತಹ ತಲೆ ತಿನ್ನುವವರ ಕೈಯಲ್ಲಿ ಸಿಕ್ಕು ಬಿದ್ದದ್ದು ಇದೆ. ತಲೆಯಲ್ಲದೇ ಇವರಿಗೆ ತಿನ್ನಲು ಬೇರೆ ಏನೂ ಸಿಗುವುದಿಲ್ಲವೇ? ಎಂದು ಕೂಡಾ ವಿಚಾರಿಸಿದ್ದಿದೆ. ಆದರೆ ಇದು ದೈಹಿಕ ಹಸಿವೆ ಯಿಂದಾಗಿ ತಿನ್ನುವ ಕ್ರಿಯೆ ಅಲ್ಲ. ಇದೊಂದು ರೀತಿಯ ಮಾನಸಿಕ ತೃಷೆ. ನಿಜ ಹೇಳಬೇಕೆಂದರೆ ಹಾಗೆ ತಲೆ ತಿನ್ನುವವರಿಗೆ ತಾವು ತಲೆ ತಿನ್ನುತಿದ್ದೇವೆಂಬ ಸಣ್ಣ ವಿಚಾರವೂ ಕೂಡಾ ಗೊತ್ತಿರುವುದಿಲ್ಲ. ಅವರ ದೃಷ್ಟಿಯಲ್ಲಿ ಅದೊಂದು ಸಾಮಾನ್ಯವಾದುದು.

ಹಾಗಿದ್ದರೆ ಏನೀ ತಲೆ ತಿನ್ನುವುದು? ಎನ್ನುವ ಕುತೂಹಲದ ಪ್ರಶ್ನೆ ನಮ್ಮಲ್ಲಿ ಮೂಡದೇ ಇರಲಾರದು. ಇದಕ್ಕೆ ಕೆಲವರು ತೀರಾ ಸರಳ ವಾದ ಉತ್ತರವನ್ನೂ ನೀಡುತ್ತಾರೆ. ತಲೆ ತಿನ್ನುವವರು ಎಂದರೆ ಒಂದೇ ಸಮನೇ ಮಾತನಾಡುವವರು, ಯಾವುದೇ ಮುಲಾಜಿ, ಮುಜುಗರ ಇಲ್ಲದೇ ಮಾತಿಗಿಟ್ಟುಕೊಳ್ಳುವವರು, ಎದುರಿಗಿರುವವರು ತಿಳಿದವರೋ, ಅನುಭವಿಗಳೋ ಎನ್ನುವ ಕನಿಷ್ಠ ಜ್ಞಾನವೂ ಇರದೇ ತಾವು ನೋಡಿದ್ದು, ಕೇಳಿದ್ದ್ದು, ತಿಳಿದದ್ದು ಮಾತ್ರ ನಿಜ ಹಾಗೂ ಅದೇ ಸರ್ವೋತ್ತಮ ಎಂದು ಅಭಿಪ್ರಾಯ ಮಂಡಿಸುವವರು, ಇವೆಲ್ಲವುಗಳಿಗಿಂತ ಮುಖ್ಯವಾಗಿ ಕೇಳುಗರು ಸಾಕಪ್ಪ ಸಾಕು, ಯಾವಾಗ ಈ ವ್ಯಕ್ತಿ ಮಾತನಾಡುವುದನ್ನು ನಿಲ್ಲಿಸುತ್ತಾನೆ ಮತ್ತು ಯಾವಾಗ ನಮ್ಮನ್ನು ಕೈ ಬಿಡುತ್ತಾನೆ ಎಂದು ಗೊಣಗಿಕೊಳ್ಳುವಂತೆ ಮಾಡುವವರನ್ನು ಈ ವರ್ಗಕ್ಕೆ ಸೇರಿಸಲಾಗುತ್ತದೆ. ಇವೆಲ್ಲ ಗುಣಗಳ ಜೊತೆಯಲ್ಲಿ ಇನ್ನೊಂದು ವಿಶೇಷವಾದ ಗುಣವಿರುತ್ತದೆ. ಅದೆಂದರೆ ಪ್ರಶ್ನೆಯನ್ನು ಅವರೇ ಮುಂದಿಡುತ್ತಾರೆ ಹಾಗೂ ಅದಕ್ಕೆ ಉತ್ತರವನ್ನೂ ತಾವೇ ನೀಡುತ್ತಾರೆ. ಹಾಗೆ ಮಾಡಿದರೆ ಅದರಲ್ಲಿ ಅಂಥ ವಿಶೇಷ ಎನೂ ಇಲ್ಲವೆಂದು ಬಿಡಬಹುದು. ಆದರೆ ಅದನ್ನು ತೀರಾ ತಾರ್ಕಿಕ ಅಥವಾ ವಾದಕ್ಕೆಳೆಯುವ ಮಟ್ಟಿಗೆ ಒಯ್ಯುತ್ತಾರೆ. ಎದುರಿಗೆ ಇದ್ದು ಕೇಳುವವರು ಅದರಲ್ಲಿ ಭಾಗಿಯಾಗು ವಂತೆ ಮಾಡಿ ಅವರ ಪ್ರತಿಯೊಂದು ಮಾತನ್ನೂ ಗೌಣವಾಗಿಸಿ ತಮ್ಮದೇ ಆದ ಪ್ರಭುತ್ವವನ್ನು ಸ್ಥಾಪಿಸುವುದೇ ಅವರ ಮುಖ್ಯ ಉದ್ದೇಶವಾಗಿರುತ್ತದೆ. ತಲೆ ತಿನ್ನುವವರಿಗೆ ನಿರ್ದಿಷ್ಟ ಸ್ಥಳ ಅಥವಾ ಸಂದರ್ಭ ಇರಬೇ ಕೆಂದೇನೂ ಇಲ್ಲ. ಮಾತನಾಡಲು ಒಂದು ಪೀಠಿಕೆ ಸಿಕ್ಕಿ ಬಿಟ್ಟರೆ ಸಾಕು. ನಿರರ್ಗಳವಾದ ಮಾತಿನ ವಾಗ್ಝರಿಯೇ ಶುರುವಾಗಿ ಬಿಡುತ್ತದೆ. ವಿಷಯ ಯಾವುದಾದರೂ ಇರಬಹುದು ಮತ್ತು ಅದು ಅವರಿಗೆ ತಿಳಿದಿರಬೇಕೆಂದೇನೂ ಇಲ್ಲ. ನಿಜ ಹೇಳಬೇಕೆಂದರೆ ಯಾವ ವಿಷಯ ದಲ್ಲಿ ಅವರು ಒತ್ತಿ ಒತ್ತಿ ಹೇಳುತಿರುತ್ತಾರೋ ಅಸಲಿಗೆ ಅವರಿಗೆ ಆ ವಿಷಯದಲ್ಲಿ ಏನೂ ಗೊತ್ತಿರುವುದಿಲ್ಲ. ಹಾಗಂತ ತಮಗೆ ಗೊತ್ತಿಲ್ಲ ವೆಂಬ ವಿಷಯವನ್ನು ಅವರು ಎಂದೂ ಬಿಟ್ಟು ಕೊಡುವುದಿಲ್ಲ. ಬಸ್ ಸ್ಟಾಂಡ್, ಟ್ರೇನ್, ಬಸ್‌ಗಳೇ ಇವರ ಕೇಂದ್ರ ಸ್ಥಾನ. ಎದುರಿ ಗಿದ್ದವರು ಯಾರೇ ಆಗಿರಲಿ. ಮೆಲ್ಲನೆ ಮಾತಿಗಿಳಿದು ಬಿಡುತ್ತಾರೆ. ಗಂಡು ಹೆಣ್ಣು, ಹಿರಿ ಕಿರಿಯರು ಎಂಬ ಭೇದ ಭಾವವೇ ಇರುವುದಿಲ್ಲ. ಓಡಿ ಬಂದು ಹತ್ತಿದಾಗ ಸೀಟು ಇಲ್ಲದಿದ್ದಾಗಲೂ ಸೀಟನ್ನು ನಯ ವಾಗಿ ಪಡೆದುಕೊಳ್ಳುವಂತಹ ಕುಶಾಗ್ರಮತಿಗಳು. ಕುಳಿತುಕೊಂಡ ವರೇ ಮೊದಲು ತಾನೇಕೆ ಓಡಿ ಬರಬೇಕಾಯಿತು ಎಂಬುದರಿಂದ ಪ್ರಾರಂಭಿಸಿ ತಾನೆಲ್ಲಿಗೆ ಹೊರಟಿದ್ದೇನೆ, ಅದೆಷ್ಟು ಮಹತ್ವ, ಇಂತಹ ಕೆಲಸಗಳನ್ನು ತಾನು ಎಷ್ಟು ಬಾರಿ ಮುಗಿಸಿದ್ದೇನೆ ಎಂದೆಲ್ಲಾ ಹೇಳಿಕೊಂಡು ಮೆಲ್ಲನೇ ಮುಂದಿರುವವರ ಜಾತಕವನ್ನು ಜಾಲಾಡಿಸಿ ಬಿಡುತ್ತಾರೆ. ಅವರು ಯಾವುದೇ ಊರು ಎಂದು ಹೇಳಿ ಬಿಡಲಿ. ಆ ಊರಲ್ಲಿ ತನಗಿರುವ ಪರಿಚಯದವರ ಹೆಸರು ಹೇಳಿ ತನಗೆ ತುಂಬಾ ಪರಿಚಿತರು ಎಂದು ಹೇಳಿ ಬಿಡುತ್ತಾರೆ. ಹೀಗೆ ಪ್ರಾರಂಭವಾದ ಮಾತು ಒಂದಕ್ಕೊಂದು ಪೋಣಿಸಿಕೊಳ್ಳುತ್ತಲೇ ಹೋಗುತ್ತದೆ.

ಎದುರಿಗಿರುವವರು ಹೆಣ್ಣು ಮಕ್ಕಳಾದರೆ ಕುಟುಂಬ, ಸಂಸಾರ, ಗಂಡನ ಮನೆಯಲ್ಲಿ ನಡೆದುಕೊಳ್ಳಬೇಕಾದ ರೀತಿ, ಗಂಡನ ಮನೆಯ ವರು ಕೊಡುವ ಕಷ್ಟ, ಮಕ್ಕಳ ಪಾಲನೆ ಮುಂತಾದ ವಿಷಯಗಳ ಬಗ್ಗೆ ಮಾತನಾಡುತ್ತಾ ಅವರು ಮಾತನಾಡಲೇಬೇಕಾದ ಅನಿವಾರ್ಯ ವನ್ನು ತಂದೊಡ್ಡುತ್ತಾರೆ. ಹಿರಿಯರಾಗಿದ್ದರೆ ಮಳೆ ಕಡಿಮೆಯಾಗಿ ರುವುದು, ಬೆಳೆ ಪದ್ಧತಿಯಲ್ಲಿ ಬದಲಾವಣೆ, ಅಂತರ್ಜಲದ ಕುಸಿತ ಹೀಗೆ ವಿಷಯ ಗಂಭೀರ ಚರ್ಚೆ ಪಡೆದುಕೊಳ್ಳುತ್ತದೆ. ವಿದ್ಯಾರ್ಥಿಗಳಾಗಿದ್ದರೆ ಓದಿನ ವೌಲ್ಯ, ನೌಕರಿಯ ಸಮಸ್ಯೆ, ಸಭ್ಯತೆ ಸಂಸ್ಕಾರದ ಕಡೆ ಹೊರಳುತ್ತದೆ. ಇನ್ನು ರಾಜಕೀಯವಂತೂ ಎಲ್ಲಾ ರೀತಿಯ ಜನರಿಗೂ ಸಲ್ಲುತ್ತದೆ ಮತ್ತು ಅದು ಸಾರ್ವತ್ರಿಕವಾಗಿರುತ್ತದೆ. ರಾಜಕಾರಣಿಗಳು ತನಗೆ ಯಾರ್ಯಾರು ಗೊತ್ತು, ಎಂತೆಂತಹ ಸಂದರ್ಭದಲ್ಲಿ ಯಾರ್ಯಾರ ಕೆಲಸ ಮಾಡಿಸಿ ಕೊಟ್ಟಿದ್ದಾಗಿ ಒಂದೊಂದಾಗಿ ಪಟ್ಟಿ ಬೆಳೆದು ಬಿಡುತ್ತದೆ. ಒಟ್ಟಿನಲ್ಲಿ ಇವರು ಸರ್ವ ವಿಷಯವನ್ನು ತಿಳಿದುಕೊಂಡ ಸರ್ವಜ್ಞರು.

ಇಂತಹ ತಲೆ ತಿನ್ನುವವರಿಂದ ಕೆಲವೊಂದು ಸಾರಿ ಅನುಕೂಲ ವಾಗುವುದೂ ಉಂಟು. ಅಸಹಾಯಕರು, ಅಂಗವಿಕಲರು ಬಂದಾಗ ಅವರಿಗೆ ಸೀಟು ಬಿಟ್ಟು ಕೊಡುತ್ತಾರೆ. ಅವರ ಲಗೇಜುಗಳನ್ನು ಎತ್ತಿ ಇಡುತ್ತಾರೆ. ಬಾಯ್ತುಂಬಾ ಹೊಗಳಿಕೆ ಒಂದೇ ಬಂದು ಬಿಟ್ಟರೆ ಸಾಕು ಪ್ರತಿಯಾಗಿ ಫಲವನ್ನೇನೂ ಬಯಸಲಾರರು. ಯಾವುದೇ ಕೆಲಸವನ್ನು ಹೇಳಿದರೆ ಸಾಕು ಚಿತ್ತ ಚನ್ನಾಗಿದ್ದರೆ ಮಾಡಿ ಕೊಟ್ಟು ಬಿಡುತ್ತಾರೆ. ಅಟ್ಟಕ್ಕೇರಿಸುವವರನ್ನು ಇಷ್ಟ ಪಡುತ್ತಾರೆ.

ನಾವೂ ತಲೆ ತಿನ್ನುವವರಂತೆ ಮಾತನಾಡಬೇಕೆಂದು ಪ್ರಯತ್ನಿಸಿದರೆ ಅದು ಸಾಧ್ಯವಾಗದು. ಯಾಕೆಂದರೆ ಅದು ಅವರ ಹುಟ್ಟು ಗುಣ. ಅದು ಅವರಲ್ಲಿ ಮಾತ್ರ ರಕ್ತಗತವಾಗಿ ಬಂದು ಬಿಟ್ಟಿರುತ್ತದೆ. ಅವರಂತೆ ನಾವಾಗಲು ಸಾಧ್ಯವಿಲ್ಲ. ಅವರು ನಮ್ಮಂತೆ ಮಿತಭಾಷಿಗಳಾಗಲೂ ಸಾಧ್ಯವಿಲ್ಲ. ಅವರಲ್ಲಿ ಒಂದು ಮೆಚ್ಚಬೇಕಾದ ಗುಣವೆಂದರೆ ಅವರ ಮಾತಿನಿಂದ ಯಾರ ಮಧ್ಯೆಯೂ ಜಗಳ ಹುಟ್ಟುವುದಿಲ್ಲ. ಅವರು ಅಷ್ಟೊಂದು ಎಚ್ಚರಿಕೆಯಿಂದ ಮಾತನಾಡುತ್ತಾರೆಂದಲ್ಲ. ಮಾತು ಪೂರ್ತಿ ಜೊಳ್ಳಾಗಿರುತ್ತದೆಯೇ ವಿನಃ ಯಾವ ಗಟ್ಟಿತನದ್ದಾಗಲಿ, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹದ್ದೂ ಇರುವುದಿಲ್ಲ. ಒಟ್ಟಿನಲ್ಲಿ ತಲೆ ತಿನ್ನುವವರದೊಂದು ವಿಶೇಷ ಸ್ವಭಾವ. ಎಲ್ಲರಲ್ಲಿ ಯೂ ಸಲ್ಲುವಂತಹವರು. ತಲೆ ತಿನ್ನುವಂತೆ ಮಾತನಾಡುತ್ತಾರೆ ಎನ್ನುವುದನ್ನು ಒಂದು ಬಿಟ್ಟರೆ ಅವರಿಂದ ಯಾವ ತೊಂದರೆಯೂ ಇಲ್ಲ. ಜಾಸ್ತಿ ಅವರ ಬಗ್ಗೆ ಹೇಳ ಹೋದರೆ ನನ್ನಿಂದ ನಿಮಗೆ ತಲೆ ತಿಂದ ಅನುಭವವಾಗಬಹುದು. ಹಾಗಾಗುವ ಮೊದಲೇ ನನ್ನ ಮಾತಿಗೆ ಕೊನೆ ಹೇಳುವೆ.

Writer - ಭೋಜರಾಜ ಸೊಪ್ಪಿಮಠ

contributor

Editor - ಭೋಜರಾಜ ಸೊಪ್ಪಿಮಠ

contributor

Similar News