​ಟಿಕ್ ಟಾಕ್ 'ವಿಲನ್' ಬಸ್ಸಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Update: 2019-10-06 04:13 GMT

ಬಿಜನೋರ್, ಅ.6: ಕಳೆದ ವಾರ ದುಬೈ ಹೋಟೆಲ್ ಉದ್ಯೋಗಿ ಮಹಿಳೆಯ ಹತ್ಯೆ ಪ್ರಕರಣದ ಆರೋಪಿ, ಟಿಕ್ ಟಾಕ್‌ನಲ್ಲಿ ಸ್ವತಃ 'ವಿಲನ್' ಎಂದು ಕರೆದುಕೊಂಡಿದ್ದ ಜಾನಿ ದಾದಾ ಅಲಿಯಾಸ್ ಅಶ್ವಿನಿ ಕುಮಾರ್ (30) ಬಸ್ಸಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶನಿವಾರ ಪೊಲೀಸರು ಬಸ್ಸನ್ನು ತಪಾಸಣೆಗಾಗಿ ತಡೆದಾಗ ಬಸ್ಸಿನಲ್ಲಿದ್ದ ಜಾನಿ ದಾದಾ, ತನ್ನಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡ ಎಂದು ಪೊಲೀಸರು ಹೇಳಿದ್ದಾರೆ. ಮೂರು ಹತ್ಯೆಗಳಿಗೆ ಸಂಬಂಧಿಸಿದಂತೆ 14 ಪುಟಗಳ ವಿವರಣೆ ಟಿಪ್ಪಣಿ ಕೂಡಾ ಸಿಕ್ಕಿದೆ. ಕಳೆದ ವಾರ ದುಬೈ ಹೋಟೆಲ್‌ನಲ್ಲಿ ಹತ್ಯೆ ಮಾಡಿದ್ದಾನೆ ಎನ್ನಲಾದ 27 ವರ್ಷದ ಮಹಿಳೆಯ ಹತ್ಯೆ ಪ್ರಕರಣದ ವಿವರ ಕೂಡಾ ಇದರಲ್ಲಿ ದಾಖಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಅಶ್ವಿನಿ ವಿರುದ್ಧ ಹಿಂದೆ ಯಾವುದೇ ಅಪರಾಧ ದಾಖಲೆಗಳು ಇರಲಿಲ್ಲ. ಟಿಕ್ ಟಾಕ್‌ನಲ್ಲಿ ವೀಡಿಯೊ ಅಪ್‌ಲೋಡ್ ಮಾಡುತ್ತಿದ್ದ ಈತ ಸ್ವತಃ ವಿಲನ್ ಎಂದು ಕರೆದುಕೊಂಡಿದ್ದ.

ನಾನು ಎಲ್ಲವನ್ನೂ ನಾಶಪಡಿಸುತ್ತೇನೆ; ದೆವ್ವ ಸಜ್ಜಾಗಿದೆ ಮತ್ತು ನನ್ನ ಆವಾಂತರ ನೋಡಿ ಎಂದು ಫೇಸ್‌ಬುಕ್‌ನಲ್ಲಿ ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದರೂ, ಕೆಲ ತಿಂಗಳ ಹಿಂದಿನವರೆಗೂ ಯಾರಿಗೂ ಹಾನಿ ಮಾಡಿರಲಿಲ್ಲ. ಆದರೆ ಸೆಪ್ಟೆಂಬರ್ 26ರಂದು ಬಿಜನೋರ್‌ನ ಬಾಹ್ರಾಪುರ ಎಂಬಲ್ಲಿ ವಿವಾದವೊಂದರ ಸಂಬಂಧ ಬಿಜೆಪಿ ನಾಯಕನ 25 ವರ್ಷದ ಪುತ್ರ ಹಾಗೂ 26 ವರ್ಷದ ಅಳಿಯನನ್ನು ಹತ್ಯೆ ಮಾಡಿದ್ದ ಆರೋಪ ಈತನ ಮೇಲಿತ್ತು.

ಬಿಜೆಪಿ ಮುಖಂಡ ಭೀಮ್ ಸಿಂಗ್ ಕಶ್ಯಪ್‌ನ ಮಗ ರಾಹುಲ್ ಕುಮಾರ್ ಹಾಗೂ ಸಂಬಂಧಿ ಕೃಷ್ಣ ಅಲಿಯಾಸ್ ಲಾಲಾ ಎಂಬುವವರನ್ನು ಮದ್ಯಪಾನಕ್ಕೆ ಆಹ್ವಾನಿಸಿ ಗುಂಡಿಟ್ಟು ಕೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇದಾದ ಬಳಿಕ ಪಿಸ್ತೂಲು ತೋರಿಸಿ ಬೆದರಿಸಿ ಜನನಿಬಿಡ ಮಾರುಕಟ್ಟೆ ಪ್ರದೇಶದಿಂದ ತಪ್ಪಿಸಿಕೊಂಡಿದ್ದ.

ಸೆಪ್ಟಂಬರ್ 30ರಂದು 27 ವರ್ಷದ ನಿಮಿತಾ ಶರ್ಮಾ ಎಂಬ ದುಬೈ ಹೋಟೆಲ್ ಉದ್ಯೋಗಿಯ ಮನೆಗೆ ನುಗ್ಗಿ ಹಲವು ಸುತ್ತು ಗುಂಡು ಹಾರಿಸಿ ಆಕೆಯನ್ನು ಹತ್ಯೆ ಮಾಡಿದ್ದ. ನಿಕಿತಾ ಶರ್ಮಾ ವಿವಾಹಕ್ಕಾಗಿ ರಜೆ ಮೇಲೆ ಹುಟ್ಟೂರಿಗೆ ಬಂದಿದ್ದಾಗ ಈ ಕೃತ್ಯ ಎಸಗಿದ್ದ. ಡಿಸೆಂಬರ್ 2ರಂದು ಈಕೆಯ ವಿವಾಹ ಚೆನ್ನೈನ ಸಿಐಎಸ್‌ಎಫ್ ಸಬ್‌ ಇನ್‌ಸ್ಪೆಕ್ಟರ್ ಜತೆ ನೆರವೇರಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News