ಹೊಸ ತಲೆಮಾರಿನ ನಿಜದ ಕಾವ್ಯಾಭಿವ್ಯಕ್ತಿ

Update: 2019-10-06 06:08 GMT

ಗೆಳೆಯ ನೂರುಲ್ಲಾ ತ್ಯಾಮಗೊಂಡ್ಲು ಮತ್ತು ನನ್ನ ಸ್ನೇಹ ಸುಮಾರು ಆರುವರೆ ವರ್ಷದ್ದು. ಸಿಟ್ಟು ಸಿಡುಕು ಆವೇಶ ಅವರಲ್ಲಿ ಕಂಡಂತೆ ಅವರ ಕವಿತೆಗಳಲ್ಲೂ ಇದೆ. ಯಾವುದನ್ನೇ ಆಗಲಿ ಖಡಕ್ಕಾಗಿ ಪ್ರತಿಭಟಿಸುವ ನೇರ ಮಾತಿನ ನಿಷ್ಠೂರವಾದಿ ಮನುಷ್ಯ. ಅಷ್ಟು ಸುಲಭವಾಗಿ ರಾಜಿಯಾಗದ ನಡತೆ. ‘ನನ್ನಪ್ಪ ಒಂದು ಗ್ಯಾಲಕ್ಸಿ’ ಅವರ ಎರಡನೆಯ ಕವನ ಸಂಕಲನ. ಕಾವ್ಯಮನೆ ಎಂಬ ಪ್ರಕಾಶನ ಗಝಲ್ ಮಾಂತ್ರಿಕೆ ಮೆಹಬೂಬ್ ಬೀಯವರ ಸಹಕಾರದಿಂದ ಪ್ರಕಟಿಸಿದೆ. ಇದರಲ್ಲಿ ಐವತ್ತೊಂದು ಕವಿತೆಗಳಿವೆ. ಎನ್ಟಿ ಎಂದೇ ಹೆಸರಾಗಿರುವ ಇವರ ಕವಿತೆಗಳು ಭ್ರಮೆಯ ಹಂಗನ್ನು ತೊರೆದು ನೇರವಾಗಿ ಖಡಕ್ಕಾಗಿ ಕೈ ತೋರಿಸಿ ಮಾತಾಡಿಸುತ್ತವೆ. ಹಬ್ಬಿದ ಕತ್ತಲೆಯ ಪರದೆಯನ್ನು ಸರಿಸಿ ಬೆಳಕಿನ ಕಿರಣಗಳನ್ನು ತೊಟ್ಟು ಬೆಳಗುವ ಇವರ ಈ ಕವಿತೆಗಳನ್ನು ಐದು ಭಾಗಗಳಲ್ಲಿ ನೋಡಬೇಕಾಗುತ್ತದೆ.

ಒಂದನೇ ಭಾಗದಲ್ಲಿ ಭುಗಿಲೆದ್ದ ಹಾಡು, ಗನ್ನುಹಿಡಿದ ಕೈ, ದಿನ ಪತ್ರಿಕೆ, ಟ್ರೈಗೀಸ್ ನದಿ ದಂಡೆ-ನಿಮ್ಮದು, ಹಸಿವು, ಖಾಲಿ ಜೇಬುಗಳು, ವೌನ ತ್ರಿವರ್ಣಧ್ವಜ, ರಾಜಬೀದಿ, ಬಂದೂಕು ...ಬದುಕು, ಒಂದು ಅಸ್ಮಿತೆ ಕವಿತೆಗಳು ಸಮಾಜದಲ್ಲಿ ಮನೆ ಮಾಡಿರುವ ಧರ್ಮಾಂಧಕಾರ, ಜಾತೀಯತೆ ವೌಢ್ಯತೆಯ ವಿರುದ್ಧ ನೋವಿನಿಂದಲೇ ತೊಡೆ ತಟ್ಟಿ ನಿಂತು ಗದರಿಸುವಲ್ಲಿ ಯಶಸ್ವಿಯಾಗಿವೆ. ಇಂಡಿಯಾದ ಇಂಡಿಪೆಂಡೆಂಟಿನ ದಿನಗಳು
ಸತ್ತು ಬೂದಿಯಾಗಿ ಎಷ್ಟೋ ದಿನಗಳಾಗಿ
ನಿನಗೆ ಮಾತ್ರ ಖಬರಿಲ್ಲ

ದೇಶದ ಹೆಸರಲ್ಲಿನ ಸ್ವಾತಂತ್ರ ನೆಪ ಮಾತ್ರ. ಇಲ್ಲಿನ ಗುಲಾಮತನ ಜಾತೀಯತೆ ಅಸಮಾನತೆ, ವೌಢ್ಯ, ಅಂಧಕಾರ ಇನ್ನೂ ಅಳಿಸಿಲ್ಲ. ಸಮಾನತೆಯ ಶ್ರೀ ರಕ್ಷೆಗಾಗಿ ಈಗಲೂ ಒದ್ದಲಾಡುತ್ತಿರುವ ದಲಿತರು ಅಲ್ಪಸಂಖ್ಯಾತರು ನಮ್ಮ ಕಣ್ಣ ಮುಂದಿದ್ದಾರೆ. ಜಾತಿಯ ಹೆಸರಲ್ಲಿ, ತಿನ್ನುವ ಆಹಾರದ ಹೆಸರಲ್ಲಿ ಶೋಷಣೆ ನಡೆಯುತ್ತಲೇ ಬಂದಿದೆ. ಖಾಕಿಯ ಕೋಮು ನಡೆ, ಭ್ರಷ್ಟತೆ; ಕಾವಿಯ ಪಕ್ಷಪಾತದ ಕಾವು; ಖಾದಿಯ ಗೂಂಡಾಗಿರಿ, ಅಧಿಕಾರ ದಾಹ, ಮದ, ಮತ ಭ್ರಷ್ಟತೆ, ಸೋಗಲಾಡಿತನ ಬಡವರ ಬದುಕನ್ನು ಹೈರಾಣಾಗಿಸಿದೆ. ಇವರೆಲ್ಲರ ಕಾಲಡಿ ಬಂಧಿಯಾಗಿರುವ ಸ್ವಾತಂತ್ರ ನಿಜಕ್ಕೂ ಸತ್ತು ಬೂದಿಯಾಗಿದೆ ಎಂದು ಕವಿ ಇಂದಿನ ರಾಜಕೀಯ ನಡೆ ನುಡಿಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಗನ್ನು ಹಿಡಿದ ಕೈ ಇದೊಂದು ಆಶಾವಾದದ ಕವಿತೆ. ಕ್ರೂರ ಮೃಗತ್ವದ ಮನಸ್ಸುಗಳು ಅಕ್ಷರದ ವ್ಯಾಮೋಹಕ್ಕೆ ಬೀಳದೆ ಗನ್ನು ಹಿಡಿದ ರಾಕ್ಷಸಿ ಕೃತ್ಯವನ್ನು ನೇರವಾಗಿ ತಳ್ಳಿಹಾಕುತ್ತವೆೆ. ಈ ಕವಿತೆಯಲ್ಲಿ ವ್ಯಕ್ತಪಡಿಸಿರುವಂತೆ ಒಂದುವೇಳೆ ಪೆನ್ನು ಹಿಡಿದಿದ್ದರೆ ಮೃದುತ್ವದ ಬುದ್ಧತ್ವ ಧೋರಣೆ ತಾಳುತ್ತಿದ್ದರೇನೋ ಎಂಬುದು ಕವಿಯ ಆಶಯ. ನಾಳೆಯಾದರೂ ಉಳಿಯಲಿ
ಈ ನೆಲದ ನಾಗರಿಕತೆ
ಸಂಸ್ಕೃತಿ-ಮನುಕುಲತೆ

ಎಂದು ಹೇಳುವ ಕವಿಯ ಆಶಯ ಪ್ರಜ್ಞೆ ಈ ಹೊತ್ತಿನ ಜೀವಂತ ಕಾವ್ಯದನಿ. ಬಾ ಇನ್ನು ಕಾಲ ಮಿಂಚಿಲ್ಲ
ಮತ ಧರ್ಮಗಳ ಬಂಧವನ್ನು ಮುರಿದು
ಪ್ರೇಮದ ಋಜುತ್ವವಿದೆ
ಹೃದಯದ ಚಿಲುಮೆಯಲಿ
ಒಂದಿಷ್ಟು ಕುಡಿದು ನಿರಾಳಿಸೋಣ 

ಎನ್ನುವ ಕವಿಯ ಪ್ರೇಮ ಭಾಷೆ ವರ್ತಮಾನಕ್ಕೆ ಅಪ್ಯಾಯಾಮಾನವಾಗಿರುವಂಥದ್ದು. ವಿಮರ್ಶಕ ಡಿ.ಆರ್. ನಾಗರಾಜ್ ರವರು ಹೇಳುವಂತೆ ಕಾವ್ಯ ಬರೀ ಲೋಲಪತೆ ಅಲ್ಲ. ವರ್ತಮಾನದಲ್ಲಿಲ್ಲದ ಆದರೆ ಭವಿಷ್ಯದ ಗರ್ಭದಲ್ಲಿರುವ ಸಮಾಜದ ಅಮೃತಕ್ಕೆ ಹಾರುವ ಗರುಡ ಅದು. ಆದರೆ ಗರುಡನಿಗೆ ಕಾಲ ಕೆಳಗೆ ಹರಿವ ಹಾವಿನ ಕಡೆಗೂ ಗಮನವಿರಬೇಕು. ಅಂದರೆ ಸಾಮಾಜಿಕ ವೈರುಧ್ಯಗಳಿಗೂ ತೀವ್ರವಾಗಿ ಪ್ರತಿ ಸ್ಪಂದಿಸಬೇಕು. ಉದಾಹರಣೆ ಎಂಬಂತೆ ಇಲ್ಲಿನ ಮೊದಲ ಭಾಗದಲ್ಲಿನ ಕವಿತೆಗಳಲ್ಲಿ ಅಂತಹ ವೈರುಧ್ಯ, ತಳಮಳ ಬಂಡಾಯ ಪ್ರಜ್ಞೆ ಚುರುಕಾಗಿವೆ. ಪ್ರಶ್ನಿಸಬೇಕಿದೆ
ನಮ್ಮ ಎದೆಗಳಿಗೆ ಗುಂಡು ಹೊಡೆಯುವ
ಚಂಡ ಶೂರರನ್ನು
ಕ್ರೂರ ಕಿರಾತಕರನ್ನು
ನಮ್ಮ ಸುಂದರ ಬದುಕನ್ನು ಕಸಿಯುತ್ತಿರುವ ಗೋಮುಖ ವ್ಯಾಘ್ರರನ್ನು
ದೇಶಕ್ಕೆ ದಾರಿದ್ರದ ಮುಸುಕನ್ನು
ಹೊದಿಸುತ್ತಿರುವ
ಮೂಲಭೂತವಾದಿಗಳನ್ನು.

ಹೌದು ಯಾವುದನ್ನು ಪ್ರಶ್ನಿಸದ ಹೊರತು ಪಡೆಯಲಾಗದ ಸ್ಥಿತಿಯನ್ನು ತಲುಪಿರುವ ದೇಶದಲ್ಲಿ, ಪ್ರಶ್ನಿಸಲಾರದೇ ಎಷ್ಟೋ ಜನರ ಬದುಕು ಮಣ್ಣಾಗಿದೆ, ಮೂರಾಬಟ್ಟೆಯಾಗಿದೆ. ಅಂಥ ದೇಶದಾರಿದ್ರಕ್ಕೆ ನಮ್ಮ ಅಭಿವ್ಯಕ್ತ ಪ್ರಶ್ನೆಯೇ ಪುರುಷೋತ್ತಮನ ಅಸ್ತ್ರವಾಗಲಿದೆ. ಎರಡನೇ ಭಾಗದಲ್ಲಿ ನೋಡುವ ಕವಿತೆಗಳು ಸೂಫಿ ಹೃದಯ ಸಮುದ್ರದ ಬೆಳಕಿನ ಹಾದಿಯದು. ಇಲ್ಲಿನ ರಾಬಿಯಾ ಬಸ್ರಿ, ಪ್ರೇಮ ಸಮಾಧಿ, ಆದಿ, ಒಂದಿಷ್ಟು ಕರುಣೆ ಸಾಕು, ಸಾಕಿ ನಾನೊಂದು ಹುಲ್ಲೆಸಳು, ಫಕೀರರ ಗೂಡು, ಬೆತ್ತಲೆ ಫಕೀರ, ಆತ್ಮ ಯಾವ ಕುಲ? ಯಶಸ್ವಿ ಕವಿತೆಗಳು. ಪ್ರೇಮಾನುಸಂಧಾನ ಸೂಫಿ ಕಾವ್ಯತತ್ಪರತೆ. ಅಂಥ ಒಂದು ಕವಿತೆ ಆತ್ಮ ಯಾವ ಕುಲ? ನೀನು ಕುಲದ ಪ್ರಶ್ನೆಯೆತ್ತುಕೊಂಡಾಗ
ನನ್ನೊಳಗೆ ಕಲಕಿದ್ದು ಮತ್ತೆ ಅದೇ ಪ್ರಶ್ನೆ

ಆತ್ಮ ಯಾವ ಕುಲ? ಆತ್ಮದ ಚಲಿಸುವ ದಾರಿಯಲ್ಲಿ ಯಾವುದೇ ಕತ್ತಲೆಯ ಕೂಪಗಳು ಇರುವುದಿಲ್ಲ. ಅದು ತತ್ವಪದ ಶಾರೀರಿಕ ನೆರಳಿನಲ್ಲಿ ವಿಶ್ರಮಿಸುವ ಒಂದು ಮುಕ್ತ ತಾವು. ತಾನು ದೇವರು ಪ್ರೀತಿಯ ನಡುವಿನ ಮುಕ್ತ ಮೆದು ಮಾತುಕತೆ. ಅಲ್ಲಿ ಯಾವ ಗೋಜಲುಗಳ ಶಂಖ ಮೊಳಗುವುದಿಲ್ಲ. ಅಲ್ಲಿ ಪ್ರೀತಿ ಮಂಪರಲ್ಲಿ ತೇಲುವ ಮತ್ತೇರಿದ ಧ್ಯಾನದ ಜಾಡು. ತನ್ನ ಶರೀರದಲ್ಲಡಗಿದ ಬೆಳಕಿನ ಹುಡುಕಾಟದಲ್ಲಿ ನಡೆಯುವ ಸೂಫಿಗಳು ಎಲ್ಲವನ್ನೂ ತ್ಯಜಿಸಿ ಬೆತ್ತಲೆ ಫಕೀರನ ಹಾಗೆ ಚಲಿಸುವ ಬೆಳ್ದಿಂಗಳು. ಅಲ್ಲಿ ಹೊಸ್ತಿಲ ಸಂಸ್ಕಾರವಿಲ್ಲದ ಚಂದನೆಯ ರೆಕ್ಕೆ ಬೀಸುವ ವೌನ ಹಕ್ಕಿಯು ನುಲಿದ ಮೃದು ಧೋರಣೆ ಎಂತಹವರನ್ನೂ ಮೂಕವನ್ನಾಗಿಸುತ್ತದೆ. ಅದೊಂದು ಮುಕ್ತ ಭಾವ ಸಂವೇದಿ ಕ್ರಿಯೆ. ಸೂಫಿ ತತ್ವಪದಕಾರರಿಗೆ ನೆಲೆ ಕುಲವಿಲ್ಲದ ಅಲೆಮಾರಿಗಳಂತೆ ಚಲಿಸುವ ವೌನ ಸಂಭಾಷಣೆ, ಧ್ಯಾನದ ಹಂಗು. ತನಗೇನು ಬೇಕಿಲ್ಲದ ತನಗಾಗಿ ಏನೂ ಸಂಪಾದಿಸಿ ಕೊಳ್ಳದ ಏಕತಾರಿಯ ತಂತಿಯೊಳಗಣ ಶಬ್ದವು ಹರಿದ ಜಾಡಿನಲ್ಲಿ ಕಂಡುಕೊಂಡ ಮಮತೆ ಪ್ರೀತಿಯ ಬುತ್ತಿ ಹೊತ್ತ ಅವರಿಗೆ ಬಾಹ್ಯ ಜಗತ್ತಿನ ಕನಸುಗಳೇ ನಗಣ್ಯ. ಸೂಫಿ ನಡೆ ಮುಕ್ತವಾಗಿ ಚಲಿಸುವ ಹಕ್ಕಿಯ ಮುಖವಿಲ್ಲದ ದಿಕ್ಕು. ಕವಿಯೇ ಹೇಳುವಂತೆ ಹೊರಗಿನ ದೀಪ ಆರಿದರೂ ಎದೆಯೊಳಗಿನ ಬೆಳಕು ಎಂದೂ ಸಾಯುವುದಿಲ್ಲ. ಅದು ನಿರಾಡಂಬರ ಜಂಗಮ ನಿಲುವು. ಘಟಶೋಧನೆಯಲ್ಲಿ ದೇಹ ತೊರೆಯುವ ಜೀವ ದೇವರು ಪ್ರೀತಿಯೆಂಬ ತಾದ್ಯತ್ಮದ ಮುಖಾಮುಖಿ. ಸೂಫಿಗಳು ಆ ಬೆಳಕಿನ ಹೆಗಲ ಮೇಲೆ ಕೂತು ಚಲಿಸುವ ಪರಿ ನಿಜಕ್ಕೂ ಮೆಚ್ಚುವಂತಹದ್ದು. ಈ ಸಂಕಲನದ ಸೂಫಿ ಕವಿತೆಗಳನ್ನು ಧ್ಯಾನಿಸಿದರೆ ಆ ತಾದ್ಯತ್ಮದ ಬೆಳಕು ಗೋಚರಿಸುತ್ತದೆ. ಸೂಫಿಗಳ ಗಾಢ ಪ್ರಭಾವ ಕವಿಯ ಹೃದಯ ಕಮಲದಲ್ಲಿ ಕೂತು ಜೀಕುವ ಪರಿ ಕವಿತೆಗಳಲ್ಲಿ ಕಾಣಿಸುತ್ತಾದರೂ ಕವಿಯೊಳಗಿನ ಸಂಸಾರದ ತಾಕಲಾಟಗಳು ಧ್ಯಾನದ ಮುಕ್ತಪ್ರವೇಶಕ್ಕೆ ಅಡ್ಡಿಯ ಛಾಯೆ ಇದ್ದೇ ಇದೆ. ಸಾಂಸಾರಿಕ ಜೀವನದ ನೆಲೆಗಟ್ಟೇ ಎಲ್ಲಕ್ಕೂ ಮೂಲ ಬೇರು. ಅಲ್ಲಿದ್ದುಕೊಂಡೇ ತನ್ನೊಳಗೆ ಮಾಗುವ ಭಾವದ ಬೆಳಕು ಸೂಫಿಯ ಅಂತರಂಗವನ್ನು ತಟ್ಟಬೇಕು. ಅಪ್ಪಬೇಕು. ಆಗ ಜಂಗಮ ಫಕೀರನ ಜೋಳಿಗೆಯಲ್ಲಿ ಬೌದ್ಧಿಕತೆಯ ಕಾವು ಪಸರಿಸುತ್ತದೆ. ಅದರ ಸಿದ್ಧಾಂತ ಅರಿವಿನ ದಾರಿ ತೆರೆದುಕೊಳ್ಳುತ್ತದೆ. 

ಸಂಕಲನದ ಮೂರನೇ ಭಾಗದಲ್ಲಿನೋಡುವ ಕವಿತೆಗಳು ಕಾಲ ಮತ್ತು ನಾನು, ಕಾವ್ಯವೆಂದರೆ, ಕವಿತೆ ನನ್ನದು, ಕವಿತೆಯ ಸತ್ಯ, ನೆರಳ ಮುಂದೆ ಬೆಳಕು. ಕಾವ್ಯದ ಬೆರಗನ್ನು ಜೀವ ಸತ್ವದ ನೆಲೆಯಲ್ಲಿ ತಳವೂರುವ ಕಾವ್ಯ ಮಿಮಾಂಸೆಯ ಜಾಡು. ಇಲ್ಲಿನ ಕವಿತೆಗಳ ನೆರಳು. ಕಾವ್ಯವೆಂದರೆ ಹಾಗೆ ಒಂದು ಉತ್ಕಟ ಭಾವ
ಕವಿಯ ಕಣ್ಣ ಒಂದು ಸಣ್ಣ ಬೆಳಗು
ಕಡಲುಪ್ಪಿನ ಕಿನಾರೆಯಲಿ ಚಿಪ್ಪುಗಳನಾಯ್ವ
ಗೂನು ಬೆನ್ನಿನ ಆಕ್ರಂದನ
ಮೂರ್ತ ಅಮೂರ್ತ ಕಲ್ಪನೆಯ ಚಕ್ರ

ನಾ ನೇಯುವ ಕಾವ್ಯ ಯಾವತ್ತೂ ನನ್ನದಲ್ಲ

ನನ್ನ ಮತ್ತು ಕಾವ್ಯದ ಸಂಬಂಧ ಇರುವುದಾದರೂ ಒಂದಿಷ್ಟು ಹೊತ್ತು ಮಾತ್ರ

ಕವಿತೆ ಬರೆದಾದ ನಂತರ ಕವಿ ಅಲ್ಲಿರುವುದಿಲ್ಲ, ಕವಿತೆ ಮಾತ್ರ ಇರುತ್ತದೆ ಎಂಬ ಅರಿವು ಪ್ರತಿಯೊಬ್ಬ ಕವಿಗೂ ಇರಬೇಕು. ಆಗ ಮಾತ್ರ ಕವಿತೆ ಜೀವಂತ ಇರುತ್ತದೆ ಎಂಬ ಅರಿವು ಕವಿಗೆ ಇದೆ. ಆ ನಿಟ್ಟಿನಲ್ಲಿ ಕವಿತ್ವ ಗೆದ್ದಿದೆ. ಕವಿ ಅಭಿವ್ಯಕ್ತಿ ತೆರೆದು ಕೊಂಡಿರುವ ಬಗೆಯೇ ವಿಭಿನ್ನ. ಕಾವ್ಯದ ಬಗ್ಗೆ ಮಿಮಾಂಸಕರು ಬರೆದ ಹೊಳಹುಗಳ ಬೆಳಕಲ್ಲಿ ಇಲ್ಲಿನ ಕವಿ ನಡೆಯುವ ಕಾವ್ಯ ದಾರಿ ಹೂವಿನೆಸಳು ಎತ್ತಿದಷ್ಟೇ ಸಲೀಸು. ಇನ್ನು ನಾಲ್ಕನೇ ಭಾಗದಲ್ಲಿ ಗುರುತಿಸಿರುವ ಕವಿತೆಗಳು ಹೆಣ್ಣಿನ ಅಸ್ಮಿತೆಯನ್ನು, ಆಕೆಯ ಸಂಕಟದ ನೋವಿನಲ್ಲಿ ಬಂದಿಯಾದ ಕವಿತೆಗಳಾಗಿವೆ
ಅದೊಂದು ಅಸಹಾಯಕ ರಾತ್ರಿಯಲಿ
ಕಡು ಕತ್ತಲೆಯ ಕೋಣೆಯಲಿ
ನನ್ನ ಮೈ ಮನಸುಗಳ ಮೇಲೆ ಹರಿದಾಡಿ
ನನ್ನಾತ್ಮವನ್ನು ನಂಜು ಮಾಡಿ ಹೋದ
ಈ ಕರಿನಾಗರವನ್ನು ಸುಡುವ
ಒಂದು ಕೊನೆ ಕ್ಷಣಕ್ಕಾಗಿ ಕಾಯುತ್ತಲೇ ಇದ್ದೇನೆ
ಹೀಗೆ ಮತ್ತೆ ಮತ್ತೆ ಸುಟ್ಟು ಹೋಗುತ್ತಲೇ ಇದ್ದೇನೆ
ನೋಡಿ ಇಲ್ಲಿನ ಕವಿತೆಯ ಆಕ್ರೋಶದ ದನಿಯು ಹೃದಯವನ್ನೇ ಕಲಕುತ್ತದೆ ಹಾಗೂ ಧ್ವನಿಸುತ್ತದೆ. ದೇಹ ಮನಸ್ಸನ್ನು ಬರ್ಬರವಾಗಿ ಶೋಷಿಸಿದ ಗಂಡೆಂಬ ಕರಿನಾಗರನನ್ನು ಸುಡುವ ಶಪಥ ಇಲ್ಲಿ ಮೊನಚಾಗಿ ಬಂದಿದೆ. ಆ ನಿಟ್ಟಿನಲ್ಲಿ ಕವಿ ಹೆಣ್ಣಿನ ನೋವಿನ ಪದರುಗಳನ್ನು ಬಿಚ್ಚಿಡುತ್ತಾರೆ ಆದರೆ ಹೆಣ್ಣಿನ ಪ್ರತೀಕಾರ ಸಾಧಿಸಿದ ಅಥವಾ ಸಬಲೆಯ ಕಾವ್ಯ ಈ ಸಂಕಲನದಲ್ಲಿ ಕೊಟ್ಟಿಲ್ಲ. ಹೆಣ್ಣು ಸಾಧಿಸಿದ ಬದುಕಿನ ಚಿತ್ರಣಗಳು ಕಾವ್ಯವಾಗಿಸುವಲ್ಲಿ ಮರೆತಿದ್ದಾರೆ ಅನ್ನಿಸುತ್ತದೆ.

ಇನ್ನು ಕೊನೆಯದಾಗಿ ಸಂಸಾರದ ಭಾಗವಾಗಿರುವ ಭಾವ ಬಂಧನದ ಕವಿತೆಗಳು ಓದುತ್ತಾ ಹೋದಂತೆ ಹಲವು ಪ್ರಜ್ಞೆಯ ಹೊಳಹುಗಳು ತೆರೆದುಕೊಳ್ಳುತ್ತವೆ. ಸಂಕಲನದ ಶೀರ್ಷಿಕೆಯ ಕವನವಂತೂ ಅಪ್ಪನ ಮೇಲಿನ ಪ್ರೀತಿ ಜೋಗು ನೆಲವಾಗಿದೆ. ನಿಜದ ಬದುಕಿನ ಅನಾವರಣದ ಬೆಳಕನ್ನು ಚೆಲ್ಲುವ ಕವಿತೆ ನಿಜಕ್ಕೂ ಗಮನ ಸೆಳೆಯುತ್ತದೆ. ಅಲ್ಲಿ ತಾಳಿರುವ ರೂಪಕಗಳು ಪ್ರತಿಮೆಗಳು ಕವಿತೆಯನ್ನು ಮತ್ತೆ ಮತ್ತೆ ಓದಿಸುತ್ತದೆ. ದೀಪಗಳು ಆರಬಹುದು ಆದರೆ ಎದೆಯೊಳಗಿನ ಬೆಳಕಲ್ಲ. ಅಪ್ಪ
ಆ ರುದ್ರ ಕಿರಣಗಳನ್ನು ಮುರಿದು
ಬಂಡೆಗೆ ಕಾವು ಕೊಡುತ್ತಾನೆ
ನನ್ನಪ್ಪ
ಈಗಲೂ ನಾಳೆಯೂ
ಬರಿಯ ಸೂರ್ಯನಲ್ಲ
ಒಂದು ಗೆಲಾಕ್ಸಿ

ಅಪ್ಪನ ಬದುಕನ್ನು ಕಣ್ಣಾರೆ ಕಂಡಿರುವ ಕವಿ. ಅಪ್ಪನ ಬಂಡೆ ಕೀಳುವ ಕೆಲಸದ ಮಜಲುಗಳನ್ನು ವಿವಿಧ ರೂಪಗಳಲ್ಲಿ ವರ್ಣಿಸುವ ಪರಿ ವರ್ಣಿಸಲಸದಳ. ಕವಿಯ ಎದೆಯಾಳದಲ್ಲಿ ಬೇರು ಬಿಟ್ಟ ಕಾವ್ಯದ ಕಾವು ಹೂವಾಗಿ ಅರಳಿ ಘಮಿಸುವಂತಿದೆ. ಜೀವಕೊಟ್ಟ ಅಪ್ಪನಿಗೊಂದು ಉಡುಗೊರೆಯಂತಿದೆ ಈ ಕವನ. ಇನ್ನು ‘ಐದು ವರ್ಷದ ನಡಿಗೆ’ ಕವನ ಮತ್ತೆ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ. ಮೃದು ತಾಯ್ತನದ ಭಾವ ಹೃದಯ ಕಲಕುತ್ತದೆ. ಅಜ್ಜನ ಸುಕ್ಕುಗಳು, ಅವ್ವನೆಟ್ಟ ಮೆಹೆಂದಿಗಿಡ ನೆನಪುಗಳ ಬುತ್ತಿ ಬಿಚ್ಚಿ ಉಣಬಡಿಸುವಲ್ಲಿ ಇಷ್ಟವಾಗುವ ಕವನಗಳಾಗಿವೆ. ಈ ಸಂಕಲನದ ಅನೇಕ ಕವಿತೆಗಳಲ್ಲಿ ಹಸಿವು ಧರ್ಮಾಂಧಕಾರದ ವಿರುದ್ಧ ಸಿಡಿದೆದ್ದಿರುವ ಲಕ್ಷಣಗಳು ಗೋಚರಿಸದಿರದು.ಆ ವಿಷಯದ ಮೇಲೆ ಪದೇ ಪದೇ ಕವನಗಳ ಶರೀರ ರೂಪುಗೊಂಡಿರುವುದು ತುಸು ಕ್ಲೀಷೆ ಎನಿಸಿದರೂ ಸಂಕಲನದ ಎಲ್ಲಾ ಕವಿತೆಗಳು ಎದೆಗಪ್ಪಿಕೊಳ್ಳಬಹುದಾದ ಕವಿತೆಗಳೇ ಆಗಿವೆ.

Writer - ಬಿದಲೋಟಿ ರಂಗನಾಥ್

contributor

Editor - ಬಿದಲೋಟಿ ರಂಗನಾಥ್

contributor

Similar News