ಮೊದಲ ಟೆಸ್ಟ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2019-10-06 09:01 GMT

ವಿಶಾಖಪಟ್ಟಣ, ಅ.6: ವೇಗದ ಬೌಲರ್ ಮುಹಮ್ಮದ್ ಶಮಿ(5-35)ಹಾಗೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (4-87)ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 203 ರನ್‌ಗಳ ಅಂತರದಿಂದ ಸೋಲುಂಡಿದೆ.

ಗೆಲ್ಲಲು 395 ರನ್ ಕಠಿಣ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ಐದನೇ ಹಾಗೂ ಕೊನೆಯ ದಿನವಾದ ರವಿವಾರ 1 ವಿಕೆಟ್ ನಷ್ಟಕ್ಕೆ 11 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿತು. 63.5 ಓವರ್‌ಗಳಲ್ಲಿ ಕೇವಲ 191ರ ನ್ ಗಳಿಸಿ ಆಲೌಟಾಯಿತು. ಭರ್ಜರಿ ಜಯ ಸಾಧಿಸಿರುವ ಕೊಹ್ಲಿ ಬಳಗ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಸಹಿತ ನಾಲ್ವರು ಆಟಗಾರರು ಖಾತೆ ತೆರೆಯಲು ವಿಫಲರಾದರು. ಆರಂಭಿಕ ಆಟಗಾರ ಮರ್ಕರಮ್ 39 ರನ್ ಹಾಗೂ ಕೆಳ ಕ್ರಮಾಂಕದಲ್ಲಿ ಪೀಡ್ತ್(56 ರನ್, 107 ಎಸೆತ, 9 ಬೌಂಡರಿ, 1 ಸಿಕ್ಸರ್)ಒಂದಷ್ಟು ಹೋರಾಟ ನೀಡಿದರು.

ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 70ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆಗ ಪೀಡ್ತ್ ಜೊತೆ ಕೈಜೋಡಿಸಿದ ಮುತ್ತುಸ್ವಾಮಿ(ಔಟಾಗದೆ 49, 108 ಎಸೆತ, 5 ಬೌಂಡರಿ) 9ನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಸೇರಿಸಿ ಸೋಲಿನ ಅಂತರ ತಗ್ಗಿಸಿದರು. ಅರ್ಧಶತಕ ಸಿಡಿಸಿ 2ನೇ ಇನಿಂಗ್ಸ್‌ನಲ್ಲಿ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದ ಪೀಡ್ತ್(56)ವೇಗದ ಬೌಲರ್ ಶಮಿಗೆ ವಿಕೆಟ್ ಒಪ್ಪಿಸಿದರು.

ರಬಾಡ ವಿಕೆಟ್ ಪಡೆದ ಶಮಿ ದಕ್ಷಿಣ ಆಫ್ರಿಕಾದ 2ನೆ ಇನಿಂಗ್ಸ್‌ಗೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News