ರಾಣೆಬೆನ್ನೂರು ಉಪಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ: ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ

Update: 2019-10-06 12:34 GMT

ಬೆಂಗಳೂರು, ಅ. 6: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾನೆ ಕಣಕ್ಕಿಳಿಯುತ್ತೇನೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದು ಉಪಚುನಾವಣೆ ನಡೆದಿದ್ದೆ ಆದರೆ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು.

ಈ ಬಾರಿ ಉಪಚುನಾವಣೆಯಲ್ಲಿ ನನ್ನ ಪುತ್ರ ಸ್ಪರ್ಧಿಸುವುದಿಲ್ಲ. ಮುಂದಿನ ಬಾರಿ ಸ್ಪರ್ಧಿಸುತ್ತಾನೆ. ಕಾಂಗ್ರೆಸ್ ಹೈಕಮಾಂಡ್ ನನ್ನ ಸ್ಪರ್ಧೆಗೆ ಅನುಮತಿ ನೀಡಿದೆ ಎಂದ ಅವರು, ರಾಣೆಬೆನ್ನೂರು ಕ್ಷೇತ್ರದ ಜನತೆಗೆ ನನಗೆ ಬೆಂಬಲಿಸುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಅಧ್ಯಕ್ಷ ಸ್ಥಾನ, ವಿಧಾನ ಪರಿಷತ್, ವಿಧಾನಸಭೆಗಳ ವಿಪಕ್ಷ ನಾಯಕರ ಸ್ಥಾನ, ಉಪ ನಾಯಕನ ಸ್ಥಾನ, ಎರಡು ಸದನಗಳ ಮುಖ್ಯ ಸಚೇತಕರ ಹುದ್ದೆಗಳು ಸೇರಿದಂತೆ ಹಲವು ಹುದ್ದೆಗಳಿಗೆ ಯಾರನ್ನು ನೇಮಿಸಬೇಕು ಎಂಬ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಸೋಲನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಎದುರಿಸಲು ಕಾಂಗ್ರೆಸ್‌ನಲ್ಲಿನ ಹುದ್ದೆಗಳ ಬದಲಾವಣೆಗೆ ಚಿಂತನೆ ನಡೆದಿದೆ. ಮಿಸ್ತ್ರಿ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾವು ನಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇವೆ ಎಂದು ಹೇಳಿದರು.

ವೈಯಕ್ತಿಕವಾಗಿ ನಾನು ಯಾರನ್ನೂ ಟೀಕೆ ಮಾಡಲು ಬಯಸುವುದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉತ್ತಮ ನಾಯಕ. ಕಾಂಗ್ರೆಸ್‌ಗೆ ಅವರ ಅಗತ್ಯವಿದ್ದು, ಅವರಿಗೂ ಸೂಕ್ತ ಸ್ಥಾನಮಾನ ಸಿಗಬೇಕಿದೆ ಎಂದು ಕೋಳಿವಾಡ ಇದೇ ವೇಳೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News