ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2019-10-06 14:34 GMT

ಬೆಂಗಳೂರು, ಅ.6: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನನ್ನು ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದವನಿಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ಗಿರೀಶ್(33) ಶಿಕ್ಷೆಗೆ ಗುರಿಯಾದವ. 2017ರ ಎ.29ರಂದು ಜರಗನಹಳ್ಳಿಯಲ್ಲಿ ರಾಘವೇಂದ್ರ ಎಂಬಾತನ ಕೊಲೆ ನಡೆದಿತ್ತು. ಸ್ನೇಹಿತರಾಗಿರುವ ಗಿರೀಶ್ ಮತ್ತು ರಾಘವೇಂದ್ರ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರು ಕೆಲವೊಮ್ಮೆ ಜರಗನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿಲ್ಲಿಸಿರುವ ಮೆಟಡೋರ್‌ನಲ್ಲಿ ಮಲಗುತ್ತಿದ್ದರು. ಎ.29ರಂದು ರಾತ್ರಿ ವಾಹನದಲ್ಲಿ ಮಲಗುವ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಕೊನೆಗೆ ರಾಘವೇಂದ್ರ ಮಲಗಿದ್ದ. ಇದರಿಂದ ಕುಪಿತಗೊಂಡ ಗಿರೀಶ್, ದೊಣ್ಣೆಯಿಂದ ರಾಘವೇಂದ್ರನ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದಾನೆ. ಪರಿಣಾಮ ರಾಘವೇಂದ್ರ ಮೃತಪಟ್ಟಿದ್ದ. ಈ ಸಂಬಂಧ ಮೃತನ ಪತ್ನಿ ನೀಡಿದ ದೂರು ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಪುಟ್ಟೇನಹಳ್ಳಿ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು.

ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆದು ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಿರೀಶ್‌ಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ.ದಂಡ ವಿಧಿಸಿ ನ್ಯಾಯಾಧೀಶರಾದ ಗುರುರಾಜ ಸೋಮಕ್ಕಳವರ್ ತೀರ್ಪು ನೀಡಿದ್ದಾರೆ. ಮೃತನ ಪತ್ನಿಗೆ 50 ಸಾವಿರ ರೂ.ಪರಿಹಾರ ನಿೀಡಲೂ ನ್ಯಾಯಾಧೀಶರು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News