ರಿಯಾಲಿಟಿ ಶೋಗಳಲ್ಲಿ ವಿಜೇತರು ಮೊದಲೇ ನಿರ್ಧಾರವಾಗಿರುತ್ತಾರೆ: ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರಾ

Update: 2019-10-06 16:21 GMT

ಬೆಂಗಳೂರು, ಅ.6: ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸಂಗೀತ ರಿಯಾಲಿಟಿ ಶೋಗಳಲ್ಲಿ ವಿಜೇತರು ಮೊದಲೇ ನಿರ್ಧಾರವಾಗಿರುತ್ತದೆ. ಇದರಿಂದ ನಿಜವಾದ ಪ್ರತಿಭಾವಂತರು ಮುನ್ನೆಲೆಗೆ ಬರುವುದಿಲ್ಲವೆಂದು ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರಾ ಅಭಿಪ್ರಾಯಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಿಯಾಲಿಟಿ ಶೋ ಪ್ರಾರಂಭವಾಗುವ ಮೊದಲೇ ಇಂಥವರೇ ಗೆಲ್ಲಬೇಕೆಂದು ನಿರ್ಧಾರವಾಗುತ್ತದೆ. ಹೀಗಾಗಿ ಇಂತಹ ಕಾರ್ಯಕ್ರಮಗಳಿಗೆ ತೀರ್ಪುಗಾರಳಾಗಿ ಹೋಗುವುದನ್ನೇ ನಿಲ್ಲಿಸಿದ್ದೇನೆಂದು ತಿಳಿಸಿದರು.

ರಿಯಾಲಿಟಿ ಶೋಗಳಲ್ಲಿ ಪ್ರತಿಭಾವಂತರಿದ್ದರೂ ಕೆಲವೊಮ್ಮೆ ಅವರಿಗೆ ಗೆಲುವು ಸಿಗುವುದಿಲ್ಲ. ಜಾತಿ, ಮತ ಹಿನ್ನೆಲೆ ನೋಡಿ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದೆ. ಅರ್ಹ ಪ್ರತಿಭಾವಂತರು ಗೆಲ್ಲುವಂತಾಗಬೇಕು. ತಮ್ಮ ಮಗ, ಅಥವಾ ಮಗಳ ಹಾಡಿಗೆ ಪೋಷಕರೆ ಹಣ ಗೊತ್ತು ಮಾಡುವಂತಹ ವಾತಾವರಣದಲ್ಲಿ ಮಕ್ಕಳು ಹೇಗೆ ಬೆಳೆಯಲು ಸಾಧ್ಯವೆಂದು ಅವರು ಹೇಳಿದರು.

ಶಾಸ್ತ್ರೀಯ ಸಂಗೀತ ಎಲ್ಲದಕ್ಕೂ ಅಡಿಪಾಯ. ಜ್ಯೂನಿಯರ್, ಸೀನಿಯರ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಂಗೀತ ಕ್ಷೇತ್ರ ಪ್ರವೇಶಿಸಬೇಕು. ಐದಾರು ಹಾಡು ಕಲಿತು ರಿಯಾಲಿಟಿ ಶೋಗಳಿಗೆ ಬರುತ್ತಾರೆ. ಸ್ವಂತಿಕೆ ಇರುವುದಿಲ್ಲ. ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿರುವುದಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News