ಗಾರ್ಮೆಂಟ್ಸ್ ನೌಕರರ ವೇತನ ಪರಿಷ್ಕರಣೆಗೆ ಹಗ್ಗ-ಜಗ್ಗಾಟ

Update: 2019-10-06 16:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.6: ಕಾರ್ಖಾನೆಗಳ ಮಾಲಕರು ಹಾಗೂ ಕಾರ್ಮಿಕರ ನಡುವೆ ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ನೌಕರರ ಕನಿಷ್ಠ ವೇತನ ಪರಿಷ್ಕರಣೆ ಸಂಬಂಧ ಹಗ್ಗಜಗ್ಗಾಟ ಮುಂದುವರಿದ್ದು, ತ್ರಿಪಕ್ಷೀಯ ಸಭೆಯೂ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ.

ಇತ್ತೀಚಿಗೆ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಒಂದು ಕಡೆ ನೌಕರರ ಪರವಾಗಿ ಸಭೆಯಲ್ಲಿದ್ದವರು ಪಟ್ಟು ಬಿಡದೇ ವೇತನ ಪರಿಷ್ಕರಣೆ ಮಾಡಬೇಕು ಎಂದಿದ್ದಾರೆ. ಮತ್ತೊಂದು ಕಡೆ ಕಾರ್ಖಾನೆಗಳ ಮಾಲಕರು ಹಠಕ್ಕೆ ಬಿದ್ದಿದ್ದು, ಸಭೆಯಲ್ಲಿ ಗೊಂದಲಮಯವಾಗಿದೆ.

ಗಾರ್ಮೆಂಟ್ಸ್ ನೌಕರರ ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೆ.5ರಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕಾರ್ಖಾನೆ ಮಾಲಕರು ಹಾಗೂ ಕಾರ್ಮಿಕ ಪ್ರತಿನಿಧಿಗಳನ್ನು ಒಳಗೊಂಡ ತ್ರಿಪಕ್ಷೀಯ ಸಭೆಯ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಸರಕಾರ ಹೇಳಿತ್ತು.

ಈ ಹಿನ್ನೆಲೆಯಲ್ಲಿ ಕಾರ್ಮಿಕ ಆಯುಕ್ತರಾದ ಕೆ.ಜಿ.ಶಾಂತಾರಾಮ್ ಅಧ್ಯಕ್ಷೆಯಲ್ಲಿ ಮತ್ತೊಂದು ಸುತ್ತಿನ ಸಭೆಯನ್ನು ಇತ್ತೀಚಿಗೆ ನಡೆಸಲಾಗಿತ್ತು. ಅಲ್ಲಿ ಇಲಾಖೆ ಪ್ರಸ್ತಾಪ ಮಾಡಿದ ಕನಿಷ್ಠ ವೇತನವನ್ನು ಒಪ್ಪಿಕೊಂಡಿದ್ದು, ಅದಕ್ಕಿಂತ ಹೆಚ್ಚು ವೇತನ ನೀಡಲು ಸಾಧ್ಯವಿಲ್ಲ ಎಂದು ಮಾಲಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದ 75ಕ್ಕೂ ಅಧಿಸೂಚಿತ ಉದ್ದಿಮೆಗಳಿಗೆ ನಿಗದಿಪಡಿಸಲಾಗಿರುವ ಕನಿಷ್ಠ ವೇತನವನ್ನು ಗಾರ್ಮೆಂಟ್ಸ್ ಉದ್ದಿಮೆಗೂ ನಿಗದಿಪಡಿಸಬೇಕು ಎಂದು ಗಾರ್ಮೆಂಟ್ಸ್ ನೌಕರರ ಪರ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಪಟ್ಟು ಹಿಡಿದರು. ಹೀಗಾಗಿ, ಸರಕಾರದ ನಿರ್ದೇಶನದಂತೆ ಹಿಂದಿನ ಸಭೆಯ ಪ್ರಸ್ತಾವನೆಯನ್ನು ಮರು ಪರಿಶೀಲಿಸಲು ಕರೆಯಲಾಗಿದ್ದ ತ್ರಿಪಕ್ಷೀಯ ಸಮಿತಿ ಸಭೆಯಲ್ಲಿ ಅಭಿಪ್ರಾಯ ಮಂಡನೆಗೆ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಯಿತು.

ಕಾರ್ಖಾನೆ ಮಾಲಕರು ಹಾಗೂ ಕಾರ್ಮಿಕ ಪ್ರತಿನಿಧಿಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಸಭೆಯಲ್ಲಿ ಸೌಹಾರ್ದಯುತವಾಗಿ ಎಲ್ಲರಿಗೂ ಒಪ್ಪಿಗೆ ಆಗುವಂತಹ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಷರಾ ಬರೆದು ಸಭೆಯ ನಡಾವಳಿಗಳನ್ನು ಆಯುಕ್ತರು ಸರಕಾರಕ್ಕೆ ಕಳಿಸಿ ಕೊಟ್ಟಿದ್ದಾರೆ. ಇದೀಗ ಸರಕಾರವೇ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಬೇಕಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾನೂನು ಹೋರಾಟ: ತ್ರಿಪಕ್ಷೀಯ ಸಮಿತಿ ಸಭೆ ಒಮ್ಮತದ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದೆ. ವೇತನ ಹೆಚ್ಚಳ್ಕಕೆ ಕಾರ್ಖಾನೆ ಮಾಲಕರು ಒಪ್ಪುತ್ತಿಲ್ಲ. ಕನಿಷ್ಠ ವೇತನ ನಿಗದಿಪಡಿಸುವಾಗ ಉದ್ದಿಮೆದಾರರ ಸಾಮರ್ಥ್ಯದ ಬಗ್ಗೆ ಸುಪ್ರೀಂಕೋರ್ಟ್, ಹೈಕೋರ್ಟ್ ಹಲವಾರು ಪ್ರಕರಣಗಳಲ್ಲಿ ಸ್ಪಷ್ಟ ಆದೇಶಗಳನ್ನು ಹೊರಡಿಸಿದೆ.

ಬೇರೆ ಅಧಿಸೂಚಿತ ಉದ್ದಿಮೆಗಳ ನೌಕರರಿಗೆ ಸಿಗುತ್ತಿರುವ ಕನಿಷ್ಠ ವೇತನ ಗಾರ್ಮೆಂಟ್ಸ್ ನೌಕರರಿಗೂ ಸಿಗಬೇಕು ಅನ್ನುವುದು ನಮ್ಮ ವಾದ. ಒಮ್ಮತ ನಿರ್ಣಯವಾಗದೇ ಇದ್ದರಿಂದ ಕಾನೂನು ಹೋರಾಟ ನಡೆಸುವ ಚಿಂತನೆಯಿದೆ ಎಂದು ನೌಕರರ ಮುಖಂಡರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News