ದಸರಾ ಉತ್ಸವ: ಬೆಂಗಳೂರಿನಾದ್ಯಂತ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿ !

Update: 2019-10-06 16:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.6: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಪ್ರಮಾಣದ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಬಹುತೇಕ ಕಡೆ ಕಸದ ರಾಶಿ ಬಿದ್ದಿದೆ. ಮಾರುಕಟ್ಟೆ, ಜನಸಂದಣಿ ಪ್ರದೇಶದಲ್ಲಿ ಬಾಳೆಕಂಬ, ಬೂದುಗುಂಬಳ ಅಲ್ಲಲ್ಲೇ ಬಿದ್ದಿದ್ದು, ಶೀಘ್ರ ವಿಲೇವಾರಿಯಾಗದಿದ್ದಲ್ಲಿ ಕೊಳೆತು ಗಬ್ಬು ನಾರುವ ಸ್ಥಿತಿಗೆ ತಲುಪಲಿದೆ.

ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗಿದೆ. ಸಾಮಾನ್ಯ ದಿನಗಳಲ್ಲಿ ನಗರದಲ್ಲಿ 4000 ಟನ್ ತ್ಯಾಜ್ಯ ಉತ್ಪತ್ತಿಯಾದರೆ ಹಬ್ಬದ ಸಂದರ್ಭದಲ್ಲಿ ಶೇ.20ರಿಂದ ಶೇ.30ರಷ್ಟು ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ಹೆಚ್ಚುವರಿ ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸಿದ್ದು, ವಿಲೇವಾರಿಯಾಗದೆ ಉಳಿದ ತ್ಯಾಜ್ಯ ಅಲ್ಲಲ್ಲೇ ಉಳಿಯುವ ಚಿಂತೆ ಕಾಡತೊಡಗಿದೆ.

ದಸರಾ ಹಬ್ಬದಲ್ಲಿ ತಮ್ಮ ವಾಹನಗಳಿಗೆ ಮತ್ತು ಆಯುಧಗಳನ್ನು ಬಾಳೆಕಂಬ, ಮಾವಿನಸೊಪ್ಪು, ಹೂ ಮತ್ತಿತರ ವಸ್ತುಗಳಿಂದ ಸಿಂಗರಿಸಿ ಪೂಜೆ ಮಾಡುವುದು ವಾಡಿಕೆ. ಈ ಹಬ್ಬದ ಸಂದರ್ಭದಲ್ಲಿ ಹಳ್ಳಿಗಳಿಂದ ರೈತರು ಮತ್ತು ವ್ಯಾಪಾರಿಗಳು ರಾಶಿ ರಾಶಿ ಬಾಳೆ ಕಂಬ, ಬೂದುಕುಂಬಳಕಾಯಿ, ಮಾವಿನಸೊಪ್ಪು, ಹೂ ತಂದು ಮಾರಾಟ ಮಾಡುತ್ತಾರೆ. ಹಬ್ಬ ಮುಗಿದ ಕೂಡಲೇ ವ್ಯಾಪಾರವಾಗದೇ ಉಳಿಯುವ ವಸ್ತುಗಳನ್ನು ರಸ್ತೆಯಲ್ಲೇ ಬಿಟ್ಟು ಹೋಗುತ್ತಾರೆ. ಹೀಗಾಗಿ ರಸ್ತೆ ರಸ್ತೆಗಳಲ್ಲಿ ರಾಶಿ ರಾಶಿ ಕಸ ಕಂಡು ಬರುತ್ತದೆ.

ನಗರದ ಕೆ.ಆರ್.ಮಾರುಕಟ್ಟೆ, ಪಕ್ಕದ ಮೇಲುರಸ್ತೆಯ ಪಿಲ್ಲರ್‌ಗಳು, ವಿಕ್ಟೋರಿಯಾ ಆಸ್ಪತ್ರೆಯ ಕಾಂಪೌಂಡ್ ಬಳಿ, ಮಡಿವಾಳ ಮಾರುಕಟ್ಟೆ, ಯಶವಂತಪುರ, ಗಾಂಧೀಬಜಾರ್, ಮಲ್ಲೇಶ್ವರಂ ಸೇರಿದಂತೆ ನಾನಾ ಮಾರುಕಟ್ಟೆಗಳಲ್ಲಿ ಬಾಳೆಕಂಬ, ಬೂದಗುಂಬಳ ರಾಶಿ ಬಿದ್ದಿದೆ. ಸಾರಕ್ಕಿ ಮಾರುಕಟ್ಟೆ ಬಳಿಯ ಮೆಟ್ರೊ ಮಾರ್ಗದ ಪಿಲ್ಲರ್ ಸುತ್ತಲೂ ಮಾರಾಟವಾಗದ ಬಾಳೆಕಂಬ, ಬೂದಗುಂಬಳ, ಮಾವಿನಸೊಪ್ಪಿನ ರಾಶಿಗಳನ್ನು ಕಾಣಬಹುದಾಗಿದೆ.

ಕೆಲವೆಡೆ ತ್ಯಾಜ್ಯ ರಾಶಿ ಹೆಚ್ಚಾಗಿ ಫುಟ್‌ಪಾತ್, ರಸ್ತೆಗೂ ಹರಡಿದೆ. ಕಸದ ರಾಶಿ ಬಳಿ ಬಿಡಾಡಿ ದನಗಳು, ನಾಯಿಗಳು ಬೀಡು ಬಿಟ್ಟಿದ್ದು, ಸಾರ್ವಜನಿಕರು ತೊಂದರೆಪಡುವಂತಾಗಿದೆ. ದಿನ ಕಳೆದಂತೆ ತ್ಯಾಜ್ಯ ಪ್ರಮಾಣ ಹೆಚ್ಚುತ್ತಲೇ ಇದ್ದು, ಸ್ಥಳೀಯರು ಪರದಾಡುವಂತಾಗಿದೆ. ಈ ಮಧ್ಯೆ ಕೆಲವರು ಕಸದ ರಾಶಿಗೆ ಬೆಂಕಿ ಹಚ್ಚುವುದು ಹೆಚ್ಚಾಗಿದ್ದು, ನೈರ್ಮಲ್ಯ ಇನ್ನಷ್ಟು ಹಾಳಾಗುವಂತಾಗಿದೆ. ಕಸದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯವು ಸುಟ್ಟು ಪರಿಸರಕ್ಕೆ ಇನ್ನಷ್ಟು ಹಾನಿಯಾಗುವಂತಾಗಿದೆ.

ಹೆಚ್ಚುವರಿ ಸಿಬ್ಬಂದಿ-ವಾಹನ ನಿಯೋಜನೆ:

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಶೇ.30ಕ್ಕಿಂತ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪಾಲಿಕೆಯು ಮುಂಚಿತವಾಗಿಯೇ ಹೆಚ್ಚುವರಿ ಸಿಬ್ಬಂದಿ, ವಾಹನಗಳನ್ನು ನಿಯೋಜಿಸಿಕೊಂಡಿದೆ. ಮಾರುಕಟ್ಟೆ, ವಸತಿ ಪ್ರದೇಶ, ಜನಸಂದಣಿ- ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚುವರಿ ತ್ಯಾಜ್ಯ ವಿಲೇವಾರಿಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ವಾಹನ ನಿಯೋಜಿಸಿಕೊಳ್ಳಲು ಆಯಾ ವಲಯದ ಜಂಟಿ ಆಯುಕ್ತರಿಗೆ ಅಧಿಕಾರ ನೀಡಿದೆ. ಹಾಗಾಗಿ ವಲಯ ಅಧಿಕಾರಿಗಳು ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.

ಕಸ ವಿಲೇವಾರಿಗೆ ಕ್ರಮ: ಆಯುಧ ಪೂಜೆ ಹಾಗೂ ವಿಜಯದಶಮಿ ಆಚರಣೆ ಸಂದರ್ಭದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಭಾರೀ ಪ್ರಮಾಣದಲ್ಲಿ ಬಾಳೆಕಂಬ, ಬೂದಗುಂಬಳ ರಾಶಿಯಿರುವ ಕಡೆ ಜೆಸಿಬಿ ಬಳಸಿ ತೆರವುಗೊಳಿಸಬೇಕಾಗುತ್ತದೆ. ಇದಕ್ಕೆಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಮೂರು ದಿನದಲ್ಲಿ ಸಂಪೂರ್ಣ ತ್ಯಾಜ್ಯ ವಿಲೇವಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಅಥವಾ ಮನೆ, ಕಚೇರಿ, ಅಂಗಡಿಗಳ ಮುಂಭಾಗ ಕಸವನ್ನು ಹರಡಿರುವುದು ಕಂಡು ಬಂದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ಪಾಲಿಕೆಯೊಂದಿಗೆ ಸಹಕರಿಸಬೇಕು.

- ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ

Writer - - ಬಾಬುರೆಡ್ಡಿ ಚಿಂತಾಮಣಿ

contributor

Editor - - ಬಾಬುರೆಡ್ಡಿ ಚಿಂತಾಮಣಿ

contributor

Similar News