ಜಮ್ಮು-ಕಾಶ್ಮೀರಕ್ಕೆ ಶೀಘ್ರ ರಾಜ್ಯ ಸ್ಥಾನಮಾನ ನೀಡುತ್ತೇವೆ: ಅಮಿತ್ ಶಾ

Update: 2019-10-08 09:03 GMT

ಹೊಸದಿಲ್ಲಿ, ಅ.8: ಜಮ್ಮು ಮತ್ತು ಕಾಶ್ಮೀರ ಸದಾ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುವುದಿಲ್ಲ ಹಾಗೂ ಅಲ್ಲಿನ ಭದ್ರತಾ ಸ್ಥಿತಿ ಸುಧಾರಿಸಿದ ನಂತರ ಮರಳಿ ರಾಜ್ಯ ಸ್ಥಾನಮಾನ ದೊರೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಭಾರತೀಯ  ಪೊಲೀಸ್ ಸೇವೆ (ಐಪಿಎಸ್) 2018ನೇ ಬ್ಯಾಚಿನ ಪ್ರೊಬೇಷನರುಗಳ ಜತೆ ಮಾತನಾಡಿದ ಶಾ, 370ನೇ ವಿಧಿ ರದ್ದುಗೊಳಿಸಿ ಜಮ್ಮು ಕಾಶ್ಮೀರದ  ವಿಶೇಷ ಸ್ಥಾನಮಾನವನ್ನು ಆಗಸ್ಟ್ 5ರಂದು ರದ್ದುಗೊಳಿಸಿದಂದಿನಿಂದ ಅಲ್ಲಿ ಒಂದೇ ಒಂದು ಗುಂಡು ಹಾರಿಸಲಾಗಿಲ್ಲ ಹಾಗೂ ಒಬ್ಬನೇ ಒಬ್ಬ ವ್ಯಕ್ತಿ ಸತ್ತಿಲ್ಲ ಎಂದು ಹೇಳಿದರು.

370ನೇ ವಿಧಿ ಮಾತ್ರ ಜಮ್ಮು ಕಾಶ್ಮೀರದ  ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ರಕ್ಷಿಸಬಲ್ಲದು ಎಂಬ ಭಾವನೆ ತಪ್ಪು. ಎಲ್ಲಾ  ಪ್ರಾದೇಶಿಕ ಅಸ್ಮಿತೆಗಳನ್ನು ಭಾರತೀಯ ಸಂವಿಧಾನ ರಕ್ಷಿಸುತ್ತದೆ, 370ನೇ ವಿಧಿಯ ದುರ್ಬಳಕೆಯೇ  ಉಗ್ರವಾದ ಸಮಸ್ಯೆಗೆ ಕಾರಣವಾಗಿದೆ ಎಂದರು.

ಸದ್ಯ ಕಾಶ್ಮೀರದ ಒಟ್ಟು 196 ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳ ಪೈಕಿ ಕೇವಲ 10 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾತ್ರ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಮುಂದುವರಿದಿದೆ ಎಂದರು. ಜನರ ಒಳಿತಿಗಾಗಿ ಕೆಲ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದೂ ಅವರು ಹೇಳಿಕೊಂಡರು.

ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಕುರಿತಂತೆಯೂ ಮಾತನಾಡಿದ ಶಾ, ಇದನ್ನು ಕೇವಲ ರಾಜಕೀಯ ಕ್ರಮ ಎಂದು ಪರಿಗಣಿಸಬಾರದು. ಅಭಿವೃದ್ಧಿಯ ಪ್ರಯೋಜನ ಎಲ್ಲಾ ನಾಗರಿಕರಿಗೂ ತಲುಪಿಸಲು ಇದು ಅಗತ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News