ಆನ್‌ಲೈನ್‌ನಲ್ಲಿ ಮನೆ ಬಾಗಿಲಿಗೆ ಬರಲಿದೆ ದಾಳಿಂಬೆ, ಸೀಬೆ, ಆರ್ಕಿಡ್

Update: 2019-10-08 12:45 GMT

ಬೆಂಗಳೂರು, ಅ.8: ಮುಂಬರುವ ಮಾವಿನ ಋತುಮಾನದಲ್ಲಿ ಮಾವಿನ ಆನ್‌ಲೈನ್ ಮಾರಾಟ ವಹಿವಾಟು ಹೆಚ್ಚಿಸುವ ಗುರಿ ಹೊಂದಿರುವ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು, ಇದೀಗ ದಾಳಿಂಬೆ, ಸೀಬೆ, ಅಂಜೂರ, ಬೋರೆಹಣ್ಣಿನಂತಹ ಆರೋಗ್ಯಕರ ಹಣ್ಣುಗಳ ಸರಬರಾಜು ಮಾಡಲು ಮುಂದಾಗಿದೆ.

ಇತರೆ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಆನ್‌ಲೈನ್ ಪೋರ್ಟಲ್ ಅನ್ನು ಸದಾ ಕ್ರಿಯಾಶೀಲವಾಗಿಸುವ ಉದ್ದೇಶದಿಂದ ಆಯಾ ಋತುಮಾನದಲ್ಲಿ ಸಿಗುವ ಹಣ್ಣುಗಳನ್ನು ಗ್ರಾಹಕರಿಗೆ ಆನ್‌ಲೈನ್ ಮೂಲಕ ತಲುಪಿಸುವ ಯೋಜನೆಗೆ ಮಾವು ನಿಗಮ ಚಾಲನೆ ನೀಡಿದ್ದು, ಅ.18ರಿಂದ ಮನೆ ಬಾಗಿಲಿಗೆ ಹಣ್ಣು ತಲುಪಲಿದೆ.

ಈ ಕುರಿತು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಭಾರತೀಯ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಬಳ್ಳಾರಿ ಭಾಗದ ರೈತರು ದಾಳಿಂಬೆ, ಸೀಬೆ, ಅಂಜೂರ ಹಣ್ಣುಗಳನ್ನು ಹಾಗೂ ಕೋಲಾರ ಮತ್ತಿತರ ಭಾಗದ ರೈತರು ಬೆಳೆದ ಹಣ್ಣನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಕೊಡಲಿದ್ದಾರೆ. ಜತೆಗೆ ಬಾಕ್ಸ್ ಮೇಲೆ ಗ್ರಾಹಕರ ವಿಳಾಸ, ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿಕೊಡುವಂತೆ ಮತ್ತು ನಿಗದಿತ ಸ್ಥಳಕ್ಕೆ ತಲುಪಿಸುವಂತೆ ಅಂಚೆ ಇಲಾಖೆಯು ಕೆಲವು ಶರತ್ತುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಬೇಕಾದ ಹಣ್ಣು ಪೂರೈಸಲು ನಿಗಮವು ಗ್ಲೋಬಲ್ ಗ್ಯಾಪನಿಂಗ್ ಸರ್ಟಿಫಿಕೇಟ್ ಪಡೆದ ರೈತರನ್ನು ಆಯ್ಕೆ ಮಾಡಲಾಗಿದೆ ಎಂದು ಮಾವು ನಿಗಮ ತಿಳಿಸಿದೆ.

ಬುಕಿಂಗ್ ಹೇಗೆ?: ಈಗಾಗಲೇ ಆನ್‌ಲೈನ್ ಬುಕಿಂಗ್ ಆರಂಭವಾಗಿದ್ದು, ಗ್ರಾಹಕರು ವೆಬ್‌ಸೈಟ್ www.karsirimangoes.kar.gov.in ಭೇಟಿ ನೀಡಿದರೆ ನೋಂದಾಯಿತ ರೈತರ ವಿಭಾಗಗಳು ತೆರೆದುಕೊಳ್ಳುತ್ತವೆ. ತಮಗೆ ಬೇಕಾದ ರೈತರ ಹೆಸರಿನ ವಿಭಾಗಕ್ಕೆ ಹೋದರೆ ದಾಳಿಂಬೆ, ಸೀಬೆ, ಅಂಜೂರ, ಆಯಾ ತಳಿಯ ಹೆಸರು ಹಾಗೂ ದರದೊಂದಿಗೆ ಪ್ರದರ್ಶನಗೊಂಡಿರುತ್ತದೆ. ಗ್ರಾಹಕರು ತಮಗೆ ಬೇಕಾದ ಹಣ್ಣಿನ ಮೇಲೆ ಕ್ಲಿಕ್ ಮಾಡಿ, ಆನ್‌ಲೈನ್‌ನಲ್ಲೇ ಹಣ ಪಾವತಿಸಬೇಕು (ಅಂಚೆ ಶುಲ್ಕವೂ ಸೇರಿ).

ಬುಕಿಂಗ್ ಆದ ಕೂಡಲೇ ಇಮೇಲ್ ಮತ್ತು ಮೊಬೈಲ್ ಮೂಲಕ ಅಂಚೆ ಇಲಾಖೆಗೆ ಹಾಗೂ ರೈತರಿಗೆ ಸಂದೇಶ ರವಾನೆಯಾಗುತ್ತದೆ. ಪ್ರತಿ ಬಾಕ್ಸ್‌ನಲ್ಲಿ ತಲಾ 6 ದಾಳಿಂಬೆ ಹಾಗೂ ಸೀಬೆ ಹಣ್ಣುಗಳನ್ನು ಪ್ಯಾಕ್ ಮಾಡಲಾಗುವುದು. ಅಂಜೂರ ಹಾಗೂ ಬೋರೆಹಣ್ಣು ಕೆ.ಜಿ. ಲೆಕ್ಕದಲ್ಲಿ ಪ್ಯಾಕ್ ಆಗಲಿದೆ. ಸದ್ಯ ದಸರಾ ರಜೆ ಇರುವುದರಿಂದ ಅಕ್ಟೋಬರ್ 18ರಿಂದ ಹಣ್ಣುಳ ಡೆಲಿವರಿ ಆರಂಭವಾಗಲಿದೆ.

ವಾರಕ್ಕೆ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಡೆಲಿವರಿ ಮಾಡಲು ದಿನಗಳನ್ನು ನಿಗದಿಪಡಿಸಲಾಗಿದೆ ಎನ್ನುತ್ತಾರೆ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪ ನಿರ್ದೇಶಕ ಡಾ.ಸಿ.ಜಿ.ನಾಗರಾಜ್.

ಆರೋಗ್ಯಕರ ಹಣ್ಣು ಮನೆಬಾಗಿಲಿಗೆ
ಪ್ರಸಕ್ತ ಮಾವಿನ ಋತುಮಾನದಲ್ಲಿ ಅಂಚೆ ಮೂಲಕ ಮಾವಿನ ಹಣ್ಣಿನ ಪಾರ್ಸೆಲ್ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿ ಯಶಸ್ಸು ಕಂಡಿದ್ದೇವೆ. ಹೀಗಾಗಿ ಇದೇ ಮಾದರಿಯಲ್ಲಿ ಆರೋಗ್ಯಕರವಾದ ಹಣ್ಣುಗಳ ಅಂಚೆ ಸೇವೆಯನ್ನು ಆರಂಭಿಸಲಾಗಿದೆ.
-ಡಾ. ಸಿ.ಜಿ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ

Writer - - ಯುವರಾಜ್ ಮಾಳಗಿ

contributor

Editor - - ಯುವರಾಜ್ ಮಾಳಗಿ

contributor

Similar News