ನ್ಯಾಯಾಂಗದ ಬಗ್ಗೆ ಗೌರವವಿಲ್ಲದ ಕಾರಣ ಸಂಜೀವ್ ಭಟ್ ಅರ್ಜಿ ತಿರಸ್ಕೃತ: ಗುಜರಾತ್ ಹೈಕೋರ್ಟ್

Update: 2019-10-08 19:06 GMT

ಗಾಂಧೀನಗರ, ಅ.8: ತನಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತಿನಲ್ಲಿಡಬೇಕೆಂದು ಕೋರಿದ್ದ ಗುಜರಾತ್ ರಾಜ್ಯದ ಮಾಜಿ ಪೊಲೀಸ್ ನಿರ್ದೇಶಕ ಸಂಜೀವ್ ಭಟ್ ಅವರ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದ್ದು ಅರ್ಜಿದಾರರು ನ್ಯಾಯಾಲಯದ ಬಗ್ಗೆ ಅಥವಾ ನ್ಯಾಯದ ಬಗ್ಗೆ ಗೌರವ ಹೊಂದಿಲ್ಲದ ಕಾರಣ ಅರ್ಜಿ ತಿರಸ್ಕರಿಸಿರುವುದಾಗಿ ತಿಳಿಸಿದೆ.

ಭಟ್‌ಗೆ ಐಪಿಸಿ5 ಸೆಕ್ಷನ್ 302ರಡಿ ತಪ್ಪಿತಸ್ತ ಎಂದು ನ್ಯಾಯಾಲಯ ಈಗಾಗಲೇ ಘೋಷಿಸಿದೆ. ಆದರೆ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆದಿಲ್ಲ . ಆದ್ದರಿಂದ ಅರ್ಜಿದಾರರಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿಡಬೇಕು ಎಂದು ಭಟ್ ಅವರ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದ್ದರು.

ವಿಚಾರಣೆ ನ್ಯಾಯಸಮ್ಮತವಾಗಿತ್ತೇ ಇಲ್ಲವೇ ಎಂಬುದನ್ನು ಅಂತಿಮ ತೀರ್ಪು ಪ್ರಕಟಿಸುವಾಗ ಪರಿಗಣಿಸಲಾಗುತ್ತದೆ. ಆದರೆ ಭಟ್ ಅವರು ಇದುವರೆಗೆ ನಡೆದುಕೊಂಡಿರುವುದನ್ನು ಗಮನಿಸಿದರೆ ಅವರು ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೈಕೋರ್ಟ್‌ನ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

 ಗುಜರಾತ್‌ನ ಜಾಮ್‌ನಗರದಲ್ಲಿ 1990ರಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ಭಟ್ ಆಗ ಸಂಭವಿಸಿದ್ದ ಕೋಮು ಗಲಭೆಯ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಜನರನ್ನು ಬಂಧಿಸಿದ್ದರು. ಇವರಲ್ಲಿ ಒಬ್ಬ ವ್ಯಕ್ತಿ ಬಿಡುಗಡೆಗೊಂಡ ಬಳಿಕ ತೀವ್ರ ಅಸ್ವಸ್ಥತೆಯಿಂದ ಆಸ್ಪತ್ರೆಯಲ್ಲಿ ಮೃತನಾಗಿದ್ದ. ಈ ಪ್ರಕರಣದಲ್ಲಿ ಭಟ್ ಪ್ರಧಾನ ಆರೋಪಿಯೆಂದು ಮೊಕದ್ದಮೆ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News