ಬೆಂಗಳೂರು: ನಗರದಾದ್ಯಂತ ವಿಲೇವಾರಿಯಾಗದ ತ್ಯಾಜ್ಯ, ಜನರ ಪರದಾಟ

Update: 2019-10-08 18:08 GMT

ಬೆಂಗಳೂರು, ಅ.8: ಆಯುಧ ಪೂಜೆ ಹಾಗೂ ವಿಜಯ ದಶಮಿ ಕಳೆದರೂ ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾದ ತ್ಯಾಜ್ಯ ವಿಲೇವಾರಿಯಾಗಿಲ್ಲ. ನಗರದ ಪ್ರಮುಖ ಪ್ರದೇಶ ಸೇರಿದಂತೆ ಬಹುತೇಕ ಕಡೆ ಭಾರಿ ಪ್ರಮಾಣದ ತ್ಯಾಜ್ಯ ರಸ್ತೆ, ಫುಟ್‌ಪಾತ್‌ಗಳಲ್ಲೇ ಕೊಳೆಯುತ್ತಿದ್ದು, ಜನ ಪರದಾಡುವಂತಾಗಿದೆ. ಮನೆ ಮನೆಗಳಿಗೆ ಸಂಭ್ರಮ ಹೊತ್ತು ತರುವ ವಿಜಯದಶಮಿ, ಆಯುಧ ಪೂಜೆಯು ನಗರದಲ್ಲಿ ಬೆಟ್ಟದಷ್ಟು ತ್ಯಾಜ್ಯ ರಾಶಿಯನ್ನು ಸೃಷ್ಟಿಸಿದೆ. ರಸ್ತೆಯ ಇಕ್ಕೆಲಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ ಮಾರಾಟವಾಗದೆ ಉಳಿದ ಬಾಳೆಕಂಬ, ಬೂದುಗುಂಬಳ, ಮಾವಿನಸೊಪ್ಪುಮತ್ತು ಬಾಡಿದ ಹೂವುಗಳು ರಾಶಿ ಬಿದ್ದಿದ್ದು, ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೊಳೆತು ದುರ್ವಾಸನೆ ಬೀರುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಡಕುಂಟಾಗುತ್ತಿದೆ.

ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಮಲ್ಲೇಶ್ವರಂ, ಅವೆನ್ಯೂ ರಸ್ತೆ, ಹೆಬ್ಬಾಳ, ಕನಕಪುರ ರಸ್ತೆ, ಯಶವಂತಪುರ, ಆಡುಗೋಡಿ, ಕೆ.ಆರ್.ಪುರಂ, ಯಲಹಂಕ, ಮೈಸೂರು ರಸ್ತೆ, ಗಾಂಧಿಬಜಾರ್, ಜಯನಗರ, ಬನಶಂಕರಿ ಸೇರಿದಂತೆ ಹಲವೆಡೆ ಬಿಕರಿಯಾಗದೆ ಉಳಿದ ಬಾಳೆಕಂಬ, ಬೂದುಗುಂಬಳಕಾಯಿ ರಾಶಿ ರಾಶಿ ಬಿದ್ದಿವೆ. ಕೆಲವನ್ನು ಹಸುಗಳು ರಸ್ತೆಗೆ ಎಳೆದಾಡಿ ತಂದಿವೆ. ಮೇಲುರಸ್ತೆಗಳು, ಮೆಟ್ರೊ ಮಾರ್ಗಗಳ ಕೆಳಭಾಗದಲ್ಲೂ ತ್ಯಾಜ್ಯ ಹರಡಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ದಿನ ಕಳೆದಂತೆ ವಿಲೇವಾರಿಯಾಗದ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದ್ದು, ಹಲವೆಡೆ ಬೆಂಕಿ ಹಚ್ಚಲಾಗುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ಇತರೆ ಒಣ ತ್ಯಾಜ್ಯದೊಂದಿಗೆ ಹಸಿ ಕಸವು ಸುಟ್ಟು ದುರ್ನಾತ ಹೆಚ್ಚಾಗಿ ಜನ ಪರದಾಡುವಂತಾಗಿದೆ. ಹಲವೆಡೆ ತ್ಯಾಜ್ಯ ತುಂಬಿದ ವಾಹನಗಳು ವಿಲೇವಾರಿಗೆ ಸ್ಥಳಾವಕಾಶವಿಲ್ಲದೆ ಅಲ್ಲಲ್ಲೇ ನಿಲುಗಡೆಯಾಗುವಂತಾಗಿದೆ. ಸಮಸ್ಯೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಕೆಲವೆಡೆ ರಾಜಕಾಲುವೆಗೆ ಕಸ ಸುರಿಯುತ್ತಿರುವುದು ಕಂಡುಬಂದಿದೆ. ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಸ ಸಾಗಣೆ ಟಿಪ್ಪರ್, ಕಾಂಪ್ಯಾಕ್ಟರ್, ಆಟೋ, ಲಾರಿಗಳಿಗೆ ಪೂಜೆ ಮಾಡಿದ್ದರಿಂದ ರವಿವಾರ ಕಸ ವಿಲೇವಾರಿ ಮಾಡಿಲ್ಲ. ಸೋಮವಾರ ಮತ್ತು ಮಂಗಳವಾರವೂ ಬಹುತೇಕ ಕಸದ ವಾಹನಗಳು ರಸ್ತೆಗೆ ಇಳಿದಿಲ್ಲ. ಹೀಗಾಗಿ, ತ್ಯಾಜ್ಯ ಸಾಗಣೆಗೆ ಮತ್ತಷ್ಟು ಹಿನ್ನೆಡೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸೋಮವಾರದವರೆಗೆ ಹಬ್ಬದ ಹಿನ್ನೆಲೆಯಲ್ಲಿ 1000 ಟನ್‌ನಷ್ಟು ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಹಂತ ಹಂತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಮಾರುಕಟ್ಟೆಗಳಲ್ಲಿ ಬಿಕರಿಯಾಗದ ಬಾಳೆಕಂಬ, ಬೂದಗುಂಬಳ, ತರಕಾರಿ ಇತರೆ ಪದಾರ್ಥಗಳು ರಾಶಿ ಬಿದ್ದಿದ್ದು, ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಕಸ ವಿಲೇವಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News