ಸರಕಾರ ಉಳಿಸಿಕೊಳ್ಳಲು ಬಿಎಸ್‌ವೈ ಸರ್ಕಸ್: ಮಲ್ಲಿಕಾರ್ಜುನ ಖರ್ಗೆ

Update: 2019-10-09 12:48 GMT

ಕಲಬುರ್ಗಿ, ಅ.9: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೇಂದ್ರದಿಂದ ಸೂಕ್ತವಾದ ಸ್ಪಂದನೆ ಸಿಗುತ್ತಿಲ್ಲ. ಸರಕಾರ ಉಳಿಸಿಕೊಳ್ಳುವುದಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೇಂದ್ರದಿಂದ ಸೂಕ್ತವಾದ ಸ್ಪಂದನೆ ಸಿಗುತ್ತಿಲ್ಲ. ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ರಾಜ್ಯ ಹಾಗೂ ಕೇಂದ್ರದ ವಿರುದ್ಧ ಧ್ವನಿ ಎತ್ತಲು ಯಾರೂ ಇಲ್ಲದಂತಾಗಿದೆ. ಕೇಂದ್ರಕ್ಕೆ ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲವಾಗಿದೆ ಎಂದು ಅವರು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾನಾಡಿದರೆ ಪ್ರಕರಣ ದಾಖಲಿಸುತ್ತಾರೆ. ಮೋದಿ ಮೇಲೆ ನಂಬಿಕೆ ಇಟ್ಟವರು ದೇಶಭಕ್ತರು, ಉಳಿದವರು ದೇಶದ್ರೋಹಿಗಳಾ ಎಂದು ಪ್ರಶ್ನಿಸಿದ ಅವರು, ಸರಕಾರ ಉಳಿಸಿಕೊಳ್ಳುವುದಕ್ಕಾಗಿ ಬಿಎಸ್‌ವೈ ಸರ್ಕಸ್ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಕೇಂದ್ರದ ವಿರುದ್ಧ ಮಾತಾಡಿದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ ನೋಟಿಸ್ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ಖರ್ಗೆ, ಪ್ರತಿಯೊಂದಕ್ಕೂ ನೋಟಿಸ್ ನೀಡಲು ಮುಂದಾದರೆ, ಅನ್ಯಾಯದ ವಿರುದ್ಧ ವಿಧಾನಸಭೆ ಹಾಗೂ ಸಂಸತ್‌ನಲ್ಲಿ ಯಾರು ಮಾತನಾಡುತ್ತಾರೆ. ಇದು ಅವರವರ ಪಕ್ಷದ ವಿಚಾರ ಇರಬಹುದು, ಆದರೆ ಧ್ವನಿ ಹತ್ತಿಕ್ಕುವ ಕೆಲಸವನ್ನು ಯಾರೂ ಮಾಡಬಾರದು ಎಂದು ಅವರು ಹೇಳಿದರು.

ರಾಜ್ಯ ಸರಕಾರಗಳು ಕೇಳಿದಷ್ಟು ಹಣವನ್ನು ಕೇಂದ್ರದಿಂದ ನೀಡಲು ಸಾಧ್ಯವಿಲ್ಲ. ಆದರೆ, ರಾಜ್ಯ ಕೇಳಿದ್ದು 38 ಸಾವಿರ ಕೋಟಿ. ಕೊಟ್ಟಿದ್ದು ಕೇವಲ 1200 ಕೋಟಿ ರೂ. ಇಷ್ಟೊಂದು ಕನಿಷ್ಠ ಪರಿಹಾರ ಕೊಟ್ಟಿದ್ದು ಬೇಸರವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಅಭಿಪ್ರಾಯ ಭೇದಗಳು ಇರುತ್ತವೆ. ಇಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗರು ಅನ್ನುವ ಮಾತೇ ಇಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ನಡೆಯುವ ಸಂದರ್ಭದಲ್ಲಿ ಇಲ್ಲವೇ ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಮುನಿಸು ಇಲ್ಲವೇ ಭಿನ್ನಾಭಿಪ್ರಾಯಗಳಿದ್ದರೆ ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕೇ ಹೊರತು ಬೀದಿಗೆ ತರಬಾರದು.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News