ಅಧಿವೇಶನ: ವಿಧಾನಸೌಧ ಸುತ್ತಲೂ ನಿಷೇಧಾಜ್ಞೆ ಜಾರಿ

Update: 2019-10-09 14:30 GMT

ಬೆಂಗಳೂರು, ಅ.9: ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಅ.10ರಿಂದ 12ರವರೆಗೂ ಅಧಿವೇಶನ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧ ಸುತ್ತಮುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಸಂಬಂಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದು, ಅ.10ರ ಬೆಳಗ್ಗೆ 6 ರಿಂದ ಅ.12ರಂದು ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ವಿಧಾನಸೌಧ ಸುತ್ತಮುತ್ತ ಹಾಗೂ ನಗರದಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಅವರ ಅನುಯಾಯಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಆ ರೀತಿಯಾದರೆ ಪರಸ್ಪರ ಘರ್ಷಣೆ ಉಂಟಾಗಲಿದ್ದು, ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಶಾಂತಿ ಕಾಪಾಡುವ ಉದ್ದೇಶದಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ, ಧರಣಿ ಮತ್ತು ಸಭೆ ನಡೆಸುವಂತಿಲ್ಲ. ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಸೇರಿದಂತೆ ಯಾವುದೇ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ. ಯಾವುದೇ ಸ್ಫೋಟಕ ವಸ್ತುಗಳನ್ನು ಸಾಗಿಸುವಂತಿಲ್ಲ ಹಾಗೂ ಇಟ್ಟುಕೊಳ್ಳುವಂತಿಲ್ಲ. ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವಂತಿಲ್ಲ. ಪ್ರಚೋದನಕಾರಿಯಾದ ಬಹಿರಂಗ ಘೋಷಣೆ ಕೂಗುವಂತಿಲ್ಲ. ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು ಬಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News