ನೆರೆ ಪೀಡಿತ ಪ್ರದೇಶಗಳಲ್ಲಿನ ಶಾಲೆಗಳ ಮೂಲಸೌಕರ್ಯಕ್ಕೆ ಆದ್ಯತೆ: ಎಸ್.ಸುರೇಶ್ ಕುಮಾರ್

Update: 2019-10-09 17:38 GMT

ಬೆಂಗಳೂರು, ಅ.9: ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಯಾಗಿರುವ ಶಾಲಾ ಕೊಠಡಿಗಳ ಮೂಲ ಸೌಕರ್ಯ ಕಾಮಗಾರಿಗಳನ್ನು ಕೂಡಲೇ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಸಂಬಂಧ ಬುಧವಾರ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರೊಂದಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿಡಿಯೋ ಸಂವಾದ ನಡೆಸಿದರು.

ರಾಜ್ಯ ಸರಕಾರವು 500 ಕೋಟಿ ರೂ.ಗಳನ್ನು ವಿಕೋಪ ಪರಿಹಾರ ಅನುದಾನವಾಗಿ ಒದಗಿಸಿದ್ದು, ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿಗೆ ಒದಗಿಸಿರುವ, ಹಾಗೂ ಈಗಾಗಲೇ ಜಿಲ್ಲಾ ಪಂಚಾಯತ್‌ಗಳ ಖಾತೆಗಳಲ್ಲಿರುವ 250 ಕೋಟಿ ರೂ.ಗಳ ಅನುದಾನವೂ ಸೇರಿದಂತೆ ಈ ಅನುದಾನದಲ್ಲಿ ಶಾಲಾ ಕೊಠಡಿಗಳ, ಅಂಗನವಾಡಿಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆಯನ್ನು ನೀಡಿ ಕ್ರಮ ವಹಿಸಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಶಾಲೆಗಳ ಕಟ್ಟಡಗಳನ್ನು ಮಾತ್ರ ದುರಸ್ಥಿಗೆ ಪರಿಗಣಿಸಬೇಕು. ಗೋಡೆ ದುರಸ್ಥಿ, ಮೇಲ್ಛಾವಣಿ ದುರಸ್ಥಿ, ವಿಶೇಷವಾಗಿ ಹೆಣ್ಣುಮಕ್ಕಳ ಶೌಚಾಲಯ ನಿರ್ಮಾಣಕ್ಕೂ ಪ್ರಾಮುಖ್ಯತೆ ನೀಡಬೇಕು. ತರಗತಿ ನಡೆಯುವಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನೂ ಕಾಲಮಿತಿಯಲ್ಲಿ ತೆಗೆದುಕೊಳ್ಳಬೇಕು ಎಂದು ಸುರೇಶ್ ಕುಮಾರ್ ತಿಳಿಸಿದರು.

ಸಂಪೂರ್ಣ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಕೂಡಲೇ ಒಡೆದು ಹಾಕಬೇಕು. ಸ್ಥಳೀಯ ಶಾಸಕರನ್ನು ಜಿಲ್ಲಾಧಿಕಾರಿಗಳು ಹಾಗೂ ಉಪನಿರ್ದೇಶಕರು ಸಂಪರ್ಕಿಸಿ ತಮ್ಮ ನಿಧಿಯಲ್ಲಿ ಅನುದಾನ ನೀಡಲು ಕೋರಬೇಕು. ಸಂಘ ಸಂಸ್ಥೆಗಳ ಸಿಎಸ್‌ಆರ್ ಅನುದಾನದಲ್ಲಿ ಹಣ ಪಡೆಯಲು ಸ್ಥಳೀಯ ಹಂತದಲ್ಲಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ಪ್ರತಿ ವಾರದ ಆರ್ಥಿಕ ಹಾಗೂ ಭೌತಿಕ ಪ್ರಗತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಉಪನಿರ್ದೇಶಕರು ಕಡ್ಡಾಯವಾಗಿ ನೀಡಬೇಕು ಎಂದು ಸುೇಶ್ ಕುಮಾರ್ ಸೂಚನೆ ನೀಡಿದರು.

ಅ.22 ಮತ್ತು 23ರಂದು ಬೆಳಗಾವಿ, ಚಿಕ್ಕೊಡಿ, ವಿಜಯಪುರ ಜಿಲ್ಲೆಗಳಿಗೆ ನಾನು ಭೇಟಿ ನೀಡಿ ಅಲ್ಲಿನ ಶಾಲೆಗಳನ್ನು ಪರಿಶೀಲಿಸುತ್ತೇನೆ. ಅಲ್ಲದೇ, ಈ ಸಾಲಿನಿಂದಲೇ 7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಇಂದಿನಿಂದಲೇ ಶಿಕ್ಷಣ ಇಲಾಖೆಯ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಪ್ರತಿ ವಾರ ಕನಿಷ್ಟ ಐದು ಶಾಲೆಗಳಿಗೆ ಭೇಟಿ ನೀಡಿ ಈ ಬಗ್ಗೆ ಅಗತ್ಯ ಮಾರ್ಗದರ್ಶನಗಳನ್ನು ನೀಡಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News