ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ: ರಾಜ್ಯ ಸರಕಾರದ ಅವೈಜ್ಞಾನಿಕ ನಿರ್ಧಾರ; ಎಸ್‌ಡಿಪಿಐ

Update: 2019-10-09 17:45 GMT

ಬೆಂಗಳೂರು, ಅ.9: ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ರಾಜ್ಯ ಸರಕಾರದ ನಿರ್ಧಾರವು ಅವೈಜ್ಞಾನಿಕವಾಗಿದ್ದು ಮಕ್ಕಳ ಭವಿಷ್ಯ ಮತ್ತು ಕಲಿಕೆಯ ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ರಾಜ್ಯದ ಶಿಕ್ಷಣ ಸಚಿವರು ಇಂತಹ ನಿರ್ಧಾರವನ್ನು ಕೈಗೊಳ್ಳುವ ಮೊದಲು ವಿವಿಧ ಶಿಕ್ಷಣ ತಜ್ಞರು, ಮಕ್ಕಳ ಮನೋವಿಜ್ಞಾನ ಪರಿಣಿತರು, ಸಮಾಜ ಶಾಸ್ತ್ರಜ್ಞರು ಹಾಗೂ ಪ್ರಾಥಮಿಕ ಶಿಕ್ಷಕರ ಜೊತೆಗೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯಗಳನ್ನು ಗೌರವಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

ಕೇವಲ ಸ್ಪರ್ಧಾತ್ಮಕವಾಗಿ ಶಿಕ್ಷಣವನ್ನು ಹೇರುವ ಸಚಿವರ ನಿರ್ಧಾರದ ಹಿಂದೆ ಮಕ್ಕಳ ಬೌದ್ಧಿಕ ವಿಕಾಸ, ಮಾನಸಿಕ ದಾರ್ಢ್ಯತೆಯ ಸಬಲೀಕರಣ, ಕಲಿಕೆಯ ಮೇಲಿನ ಸಹಜ ಆಸಕ್ತಿ ಮೂಡಿಸುವುದು ಇತ್ಯಾದಿ ಗಂಭೀರ ವಾಸ್ತವಗಳನ್ನು ಕಡೆಗಣಿಸಿರುವುದು ಅತ್ಯಂತ ಸ್ಪಷ್ಟವಾಗಿ ವ್ಯಕ್ತವಾಗುತ್ತಿವೆ. ಕೇವಲ ಅಂಕಗಳ ಆಧಾರದಲ್ಲಿ ಮಕ್ಕಳ ಕಲಿಕೆಯ ಶ್ರೇಷ್ಠತೆಯನ್ನು ನಿರ್ಧರಿಸುವುದರಿಂದ ವಿವಿಧ ಹಿನ್ನೆಲೆಯ ಮಕ್ಕಳಲ್ಲಿ ಕೀಳರಿಮೆ, ನಿರಾಸಕ್ತಿ ಮೂಡುತ್ತದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.

ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರುವ ಇನ್ನಿತರ ಮುಖ್ಯ ಅಂಶಗಳಾದ ಆರ್ಥಿಕ ಹಿಂದುಳಿಯುವಿಕೆ, ಕಳಪೆ ಶಾಲಾ ಗುಣಮಟ್ಟ, ಶಿಕ್ಷಕರ ಬೋಧನಾ ಸಾಮರ್ಥ್ಯದ ಕೊರತೆ, ಮನೆಯೊಳಗಿನ ಸ್ಥಿತಿಗತಿ, ಹೆಚ್ಚಿನ ಮಕ್ಕಳಲ್ಲಿ ಕಂಡುಬರುವ ನಿಧಾನ ಕಲಿಕಾ ಪ್ರವೃತ್ತಿ, ಸಮಾಜದಲ್ಲಿ ಬೇರುಬಿಟ್ಟಿರುವ ಜಾತಿ-ಧರ್ಮ ತಾರತಮ್ಯ ಇತ್ಯಾದಿಗಳೆಲ್ಲವನ್ನೂ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಅಥವಾ ಅನುತ್ತೀರ್ಣರಾದ ಆ ಎಳೆಯ ಮಕ್ಕಳಲ್ಲಿ ತಮ್ಮ ಸ್ವಂತ ವ್ಯಕ್ತಿತ್ವದ ಬಗ್ಗೆ ಅದೆಷ್ಟು ಜಿಗುಪ್ಸೆ ಮೂಡಬಹುದು. ಅಷ್ಟೊಂದು ಸಣ್ಣ ಪ್ರಾಯದಲ್ಲಿ ಹೆಚ್ಚು ಅಂಕ ಗಳಸಿದ ಮಕ್ಕಳೊಂದಿಗೆ ತನ್ನನ್ನು ತುಲನೆ ಮಾಡುವಂತಹ ಅನಿವಾರ್ಯತೆಗೆ ಒಳಗಾದಾಗ ಶಿಕ್ಷಣದಲ್ಲಿ ನಿರಾಸಕ್ತಿ ಮೂಡುವುದೇ ಹೆಚ್ಚು ಎಂದು ಇಲ್ಯಾಸ್ ಮುಹಮ್ಮದ್ ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಣವೆಂಬುದು ಸ್ಪರ್ಧೆಯಲ್ಲ. ಅದು ನಾಗರಿಕತೆಯ ಹಾಗೂ ಸಾಮಾಜಿಕ, ವೈಜ್ಞಾನಿಕ ಚಿಂತನೆಯ ಪ್ರಕ್ರಿಯೆ ಎನ್ನುವುದನ್ನು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಏಳನೆ ತರಗತಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರವನ್ನು ಕೈಬಿಟ್ಟು ಏಳನೆ ತರಗತಿವರೆಗಿನ ಮಕ್ಕಳಿಗೆ ಅನುತ್ತೀರ್ಣ ಮಾಡಬಾರದು ನೀತಿಯ ಶಿಕ್ಷಣವನ್ನು ಮುಂದುವರಿಸಬೆೀಕು ಎಂದು ಅವರು ಒತ್ತಾಯಿಸಿದ್ದಾರೆ.

ಶಾಲಾ ಗುಣಮಟ್ಟ, ಶಿಕ್ಷಕರ ಉತ್ಕೃಷ್ಟ ಬೋಧನಾ ಸಾಮರ್ಥ್ಯ ಹಾಗೂ ಸಮಾಜದಲ್ಲಿ ಕಲಿಕೆಯ ಪೂರಕ ವಾತಾವರಣ ನಿರ್ಮಿಸುವಲ್ಲಿ ಹೆಚ್ಚಿನ ಗಮನ ಮತ್ತು ಮಹತ್ವವನ್ನು ನೀಡಬೇಕೆಂದು ಇಲ್ಯಾಸ್ ಮುಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.

ಪೊಲೀಸರ ಅತಿರೇಕದ ನಡೆ ಖಂಡನೀಯ: ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿ ವ್ಯವಸ್ಥೆಗಾಗಿ ಒತ್ತಾಯಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ನಿರ್ಲಕ್ಷವನ್ನು ವಿರೋಧಿಸಿದ ಪ್ರತಿಭಟನೆಯ ಆಯೋಜಕರನ್ನು ಮತ್ತು ಪ್ರತಿಭಟನಾಕಾರರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರ ಅತಿರೇಕದ ನಡೆಯನ್ನು ಇಲ್ಯಾಸ್ ಮುಹಮ್ಮದ್ ತುಂಬೆ ಖಂಡಿಸಿದ್ದಾರೆ.

ಹುಬ್ಬಳ್ಳಿ ಪೊಲೀಸರಿಗೆ ಕಾರ್ಯಕ್ರಮದ ಬಗ್ಗೆ ಮೊದಲೆ ಲಿಖಿತ ಮಾಹಿತಿ ನೀಡಿ ದೃಢೀಕರಣ ಪಡೆದಿದ್ದರೂ ಇಂದು ಬೆಳಗ್ಗೆ ಪ್ರತಿಭಟನೆಗೆ ತೆರಳುವ ಮೊದಲೆ ಪೊಲೀಸರು ಆಯೋಜಕರನ್ನು ಬಂಧಿಸಿದ್ದಾರೆ. ಇದು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವಂತುದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಕಾರಣಗಳಿಲ್ಲದೆ ಈ ರೀತಿ ಬಂಧಿಸಿರುವ ಹಿಂದೆ ರಾಜಕೀಯ ಒತ್ತಡ, ಪೂರ್ವಗ್ರಹ ಅಥವಾ ಕುತ್ಸಿತ ಹಿತಾಸಕ್ತಿ ಅಡಗಿದೆ ಎಂದು ತಿಳಿಯಬಹುದಾಗಿದೆ. ಇಂತಹ ತಾರತಮ್ಯ ಧೋರಣೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಬಗ್ಗೆ ಎಸ್‌ಡಿಪಿಐ ಕಾನೂನು ಕ್ರಮಗಳ ಮೂಲಕ ಪ್ರಶ್ನಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News