ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಫಲಕಗಳಿದ್ದರೆ ಮಾತ್ರ ಪರವಾನಿಗೆ: ಬಿಬಿಎಂಪಿ ಮೇಯರ್

Update: 2019-10-09 17:46 GMT

ಬೆಂಗಳೂರು, ಅ.9: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಗಡಿ ಮತ್ತಿತರ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡದಲ್ಲಿ ಫಲಕಗಳಿದ್ದರೆ ಮಾತ್ರ ಉದ್ಯಮಗಳಿಗೆ ಪರವಾನಿಗೆ ನೀಡುವ ಕುರಿತು ಪಾಲಿಕೆ ಚಿಂತನೆ ನಡೆಸಿದೆ.

ಯಾವುದೇ ಹೊಸ ಉದ್ಯಮಗಳ ಬೋರ್ಡಗಳಲ್ಲಿ ಕನ್ನಡವಿದ್ದರೆ ಮಾತ್ರ ಟ್ರೇಡ್ ಲೈಸೆನ್ಸ್ ನೀಡಲು ನಿರ್ಧರಿಸಿದ್ದು, ಉದ್ದಿಮೆ ಪರವಾನಿಗೆ ಕನ್ನಡ ಕಡ್ಡಾಯ ಇರಬೇಕು. ಬೋರ್ಡ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಕನ್ನಡವಿರಬೇಕು ಅದನ್ನು ಸ್ಪಷ್ಟಪಡಿಸಿಕೊಂಡೇ ಟ್ರೇಡ್ ಲೈಸೆನ್ಸ್ ನೀಡುವಂತೆ ಕಟ್ಟಪ್ಪಣೆ ಹೊರಡಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ತಿಳಿಸಿದ್ದಾರೆ.

ನವೆಂಬರ್ ತಿಂಗಳಾದ್ಯಂತ ಕನ್ನಡ ನಾಮಫಲಕಗಳ ಅಳವಡಿಕೆಗೆ ನಿರ್ಧರಿಸಲಾಗಿದೆ. ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಾಮಫಲಕಕ್ಕೆ ಸೂಕ್ತ ಮಾರ್ಗದರ್ಶನಗಳಿದ್ದು, ಆದೇಶ ಪಾಲನೆ ಮಾಡದಿರುವವರ ಪರವಾನಿಗೆಯನ್ನು ರದ್ದು ಮಾಡಲಾಗುತ್ತದೆ. ಈ ಬಗ್ಗೆ ನವೆಂಬರ್ 1ರಿಂದಲೇ ಜಾರಿಗೊಳಿಸಲು ಆಲೋಚನೆ ಮಾಡಲಾಗಿದೆ ಎನ್ನಲಾಗುತ್ತಿದೆ.

2017ರಲ್ಲಿ ಸುತ್ತೋಲೆ ಹೊರಡಿಸಿದ್ದ ಬಿಬಿಎಂಪಿ ನಾಮಫಲಕದಲ್ಲಿ ಶೇ.60 ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಟ್ಟಿರಬೇಕೆಂದು ತಿಳಿಸಿತ್ತು. ಕನ್ನಡಕ್ಕೆ ಆದ್ಯತೆ ನೀಡದಿದ್ದ ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡುವುದಾಗಿ ತಿಳಿಸಿತ್ತು. ಈ ಸುತ್ತೋಲೆಯನ್ನು ಪ್ರಶ್ನಿಸಿ ಕೆಲ ಅಂಗಡಿ ಮಾಲಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಿಬಿಎಂಪಿ ಸುತ್ತೋಲೆ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಆದೇಶ ಪಾಲಿಸಲು ಯಾವುದೇ ರೀತಿಯ ಕಾನೂನುಗಳಿಲ್ಲ ಎಂದು ನ್ಯಾಯಾಲಯ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News