ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಬುಡ್ಗ ಜಂಗಮರ ಕಾಲ್ನಡಿಗೆ ಜಾಥಾ

Update: 2019-10-09 17:47 GMT

ಬೆಂಗಳೂರು, ಅ.9: ಅಲೆಮಾರಿ ಬುಡ್ಗ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಅಲೆಮಾರಿ ಬುಡಕಟ್ಟು ಮಹಾಸಭಾ, ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಅ.16ರಂದು ಕೋಲಾರದಿಂದ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದವರೆಗೆ ಬಹತ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಮುರುಗೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಅಲೆಮಾರಿ ಬುಡ್ಗ ಜಂಗಮ ಸಮುದಾಯ ಭಿಕ್ಷಾಟನೆ ಹಾಗೂ ಹಗಲು ವೇಷ ಧರಿಸಿ ಕಷ್ಟದ ಜೀವನ ಸಾಗಿಸುತ್ತಿದ್ದು, ಈ ಜನಾಂಗ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ ಎಂದರು.

ಕೋಲಾರ ಜಿಲ್ಲೆ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿರುವ ಬುಡ್ಗ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಕೋಲಾರ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾತಿ ಪ್ರಮಾಣ ಪತ್ರ ನೀಡಲು ನಿರ್ಲಕ್ಷಿಸುತ್ತಿರುವುದು ಖಂಡನೀಯ. ಅಕ್ಟೋಬರ್ 16 ರಂದು ಕೋಲಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಬಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅನಿರ್ದಿಷ್ಟಾವಧಿಯ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಳೆದ 8 ವರ್ಷಗಳಿಂದ ವಿನಾಕಾರಣ ಜಿಲ್ಲೆಯಾದ್ಯಂತ ಇರುವ ಬುಡ್ಗ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡದೇ ಇರುವುದರಿಂದ ಸಾವಿರಾರು ಮಕ್ಕಳು ಶಿಕ್ಷಣದ ಹಕ್ಕನ್ನು ಕಳೆದುಕೊಳ್ಳುವುದರ ಜೊತೆಗೆ ಅಲೆಮಾರಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News