ಇಂದಿರಾ ಕ್ಯಾಂಟೀನ್ ಮೆನು ಬದಲಾವಣೆ ಸದ್ಯಕ್ಕಿಲ್ಲ

Update: 2019-10-09 17:50 GMT

ಬೆಂಗಳೂರು, ಅ.9: ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಕ್ಯಾಂಟೀನ್ ಮೆನು ಬದಲಾಯಿಸುವ  ಯೋಜನೆ ಸದ್ಯಕ್ಕೆ ಇಲ್ಲ ಎನ್ನಲಾಗಿದೆ.

ಬಿಬಿಎಂಪಿಯ ಹಿಂದಿನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವಧಿಯಲ್ಲಿ ಕ್ಯಾಂಟೀನ್ ಮೆನು ಬದಲಿಸಬೇಕು ಎಂಬ ಚಿಂತನೆ ನಡೆಸಲಾಗಿತ್ತು. ಆಗಸ್ಟ್ ಎರಡನೇ ವಾರದಿಂದಲೇ ಹೊಸ ಮೆನು ಪರಿಚಯಿಸಬೇಕಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶ, ಹಣಕಾಸು ನೆರವಿನ ಗೊಂದಲಗಳಿಂದಾಗಿ ಮೆನು ಬದಲಾವಣೆ ಇಲ್ಲದೆ, ಯಥಾಸ್ಥಿತಿ ಮುಂದುವರಿದರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದಿರಾ ಕ್ಯಾಂಟೀನ್ ಮುಂದುವರಿಸಲು ರಾಜ್ಯ ಸರಕಾರ ಹಣಕಾಸಿನ ನೆರವು ಕೊಡದಿದ್ದರೆ ಹೇಗೆ ನಡೆಸಬೇಕು ಎಂಬುದರ ಕುರಿತು ಪಾಲಿಕೆ ಗಂಭೀರ ಚಿಂತನೆ ನಡೆಸಿದೆ. ಸರಕಾರ ಅನುದಾನ ನೀಡದಿದ್ದರೂ, ಬಿಬಿಎಂಪಿಯೇ ಇದನ್ನು ಮುಂದುವರಿಸಲಿದೆ ಎಂದು ಮಾಜಿ ಮೇಯರ್ ಗಂಗಾಂಬಿಕೆ ಹೇಳಿದ್ದರು.

ಈಗ ಪಾಲಿಕೆಯಲ್ಲಿ ಮೈತ್ರಿ ಆಡಳಿತವನ್ನು ಪತನಗೊಳಿಸಿ ಬಿಜೆಪಿ ಚುಕ್ಕಾಣಿ ಹಿಡಿದಿದೆ. ಹೀಗಾಗಿ, ಇಂದಿರಾ ಕ್ಯಾಂಟೀನ್ ಅಸ್ತಿತ್ವದ ಪ್ರಶ್ನೆಯೂ ಉದ್ಭವಿಸಿದೆ. ನೂತನ ಮೇಯರ್ ಗೌತಮ್ ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಈ ಕುರಿತು ಕೇಳಿದಾಗ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ.

ಹೊಸ ಮೆನುವಿನಲ್ಲಿ ಏನಿತ್ತು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ಸೇರ್ಪಡೆ ಮಾಡುವ ಉದ್ದೇಶದಿಂದ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ ಉಪಾಹಾರಕ್ಕೆ ಬ್ರೆಡ್-ಜಾಮ್ ಮತ್ತು ಮಂಗಳೂರು ಬನ್ಸ್, ಮಧ್ಯಾಹ್ನ ಊಟಕ್ಕೆ ರಾಗಿ ಮುದ್ದೆ, ಚಪಾತಿ ನೀಡಲು ಬಿಬಿಎಂಪಿ ಚಿಂತನೆ ನಡೆಸಿತ್ತು. ಆಗಸ್ಟ್ ಎರಡನೇ ವಾರದಿಂದ ಹೊಸ ಆಹಾರ ಪಟ್ಟಿ (ಮೆನು) ಬಹುತೇಕ ಜಾರಿಗೆ ಬರಲಿದೆ ಎಂದೇ ಹೇಳಲಾಗಿತ್ತು.

ಟೆಂಡರ್ ಅವಧಿ ಮುಕ್ತಾಯ: ಇಂದಿರಾ ಕ್ಯಾಂಟೀನ್ ಆಹಾರ ಸರಬರಾಜು ಗುತ್ತಿಗೆಯನ್ನು ಚೆಫ್ಟಾಕ್ ಹಾಗೂ ರಿವಾರ್ಡ್ ಸಂಸ್ಥೆಗಳಿಗೆ ನೀಡಲಾಗಿದೆ. ಇದರ ಗುತ್ತಿಗೆ ಅವಧಿ ಆ.16ಕ್ಕೆ ಮುಕ್ತಾಯವಾಗಿದ್ದು, ಹೊಸ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಹಾಲಿ ಸಂಸ್ಥೆಯನ್ನೆ ಮುಂದುವರಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಸಂಸ್ಥೆಗಳ ಮೇಲೆ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News