ಜನತೆಯ ಆಸಕ್ತಿಯಿಂದ ಮಾತ್ರ ವನ್ಯಜೀವಿ ಸಂರಕ್ಷಣೆ ಸಾಧ್ಯ: ವಜುಭಾಯಿ ವಾಲಾ

Update: 2019-10-09 18:10 GMT

ಬೆಂಗಳೂರು, ಅ.9:  ಅರಣ್ಯ ಹಾಗೂ ವನ್ಯಜೀವಿಗಳ ವಿಚಾರದಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತ ಕಾಳಜಿ ತೋರದ ಹೊರತು ವನ್ಯಜೀವಿ ಸಂರಕ್ಷಣೆ ಕಾರ್ಯ ಯಶಸ್ವಿಯಾಗುವುದಿಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.

ರಾಜ್ಯ ಅರಣ್ಯ ಇಲಾಖೆಯ ಬುಧವಾರ ವೈಯಲಿಕಾವಲ್‍ನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ 65ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಿಯವರೆಗೂ ಸಾರ್ವಜನಿಕರಿಗೆ ಪ್ರಾಣಿ ಹಾಗೂ ಪಕ್ಷಿಗಳ ಕುರಿತು ಪ್ರೀತಿ, ಕಾಳಜಿ ಬರುವುದಿಲ್ಲವೊ ಅಲ್ಲಿಯವರೆಗೂ ಅವುಗಳ ರಕ್ಷಣೆ ಸಾಧ್ಯವಿಲ್ಲ. ಪ್ರಾಣಿ ಪಕ್ಷಿಗಳು ಕೊಂದು ತಿನ್ನುವ ವಸ್ತುವಲ್ಲ, ನಾವು ಜೀವಿಸುವ ಜತೆಗೆ ಅವುಗಳ ಜೀವವನ್ನೂ ಗೌರವಿಸಬೇಕಿದೆ. ಮುಖ್ಯವಾಗಿ ಜನರು ಪ್ರಾಣಿ ಪಕ್ಷಿಗಳ ಕುರಿತು ದಯೆ, ಕರುಣೆ ತೋರುವ ಸ್ವಭಾವ ರೂಢಿಸಿಕೊಳ್ಳಬೇಕಿದೆ ಎಂದರು.

ಇವತ್ತು ಕಾಡಿನ ಪ್ರಾಣಿ, ಪಕ್ಷಿಗಳ ಸಂಖ್ಯೆ ಜತೆಗೆ ನಾಡಿನಲ್ಲಿ ನಮ್ಮ ಸುತ್ತಮುತ್ತಲಿದ್ದ ಪ್ರಾಣಿ - ಪಕ್ಷಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕಳೆದ 15 -20 ವರ್ಷಗಳಿಗೆ ಹೋಲಿಸಿದರೆ ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕಾಣುತ್ತಿದ್ದ ಪಕ್ಷಿಗಳಾದ ಕಾಗೆ, ಪಾರಿವಾಳಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿವೆ. ಇದಕ್ಕೆ ಕಾರಣಕ್ಕೆ ಜನರಲ್ಲಿ ಮಾನವೀಯತೆ ಅಂಶ ಮರೆಯಾಗುತ್ತಿರುವುದು. ಹಿಂದೆ ಪ್ರಾಣಿಗಳಿಗೆ - ಪಕ್ಷಿಗಳಿ ಆಹಾರ ನೀಡುವ ಮಾನವಿಯತೆ ಇತ್ತು. ಆದರೆ, ಇಂದು ಮನುಷ್ಯರಿಗೆ ಒಂದು ಹೊತ್ತಿನ ಊಟ ಹಾಕಲು ಹಿಂದೇಟಾಕುವ ಮನಸ್ಥಿತಿ ಬಂದಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಗುಜರಾತ್‍ನಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಸಿಂಹಗಳಿಗೆ ಅಗತ್ಯ ನೀರು ಹಾಗೂ ಆಹಾರ ಪೂರೈಕೆಯಂತ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವುಗಳಿಗೆ ಉತ್ತಮ ವಾತಾವರಣ ಸೃಷಿಸಿರುವುದು. ಇದೇ ರೀತಿ ವನ್ಯಜೀವಿಗಳಿಗೆ ಹಾಗೂ ಇತರೆ ಪ್ರಾಣಿ ಪಕ್ಷಿಗಳಿಗೆ ಸೂಕ್ತ ಆಹಾರ ವ್ಯವಸ್ಥೆ ಮಾಡಿದಾಗ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. ವನ್ಯಜೀವಿ ಸಂರಕ್ಷಣೆ ಎಂದರೆ ಕೇವಲ ಕಾಡಿಗೆ ಹೋಗಿ ಮಾಡಬೇಕೆಂದಿಲ್ಲ. ನಿಮ್ಮ ಮನೆ, ಸುತ್ತಮುತ್ತಲ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿಗಳನ್ನು ಗೌರವಿಸುವ, ಅವುಗಳಿಗೆ ಆಹಾರ ನೀಡುವ ಕಾರ್ಯವಾಗಬೇಕಿದೆ ಎಂದು ಅವರು ತಿಳಿಸಿದರು.

ಅರಣ್ಯ ಕಳ್ಳಸಾಗಾಣಿಕೆ ಪ್ರಕರಣಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಪಾತ್ರ ಹೆಚ್ಚಿರುತ್ತದೆ. ಕಾಡು ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಕಾಡಿನೊಳಗೆ ಹಾಗೂ ಕಾಡಿನ ಸುತ್ತಮುತ್ತಲು ವಾಸಿಸುವ ಜನರ ಪಾತ್ರವೂ ಹೆಚ್ಚಿದ್ದು, ಅವರು ವನ್ಯಜೀವಿಗಳ ಜತೆಗೆ ಅವಿನಾಭಾವ ಸಂಬಂಧ ಹೊಂದಿದ್ದು, ನಿರಂತರ ಅವುಗಳ ರಕ್ಷಣೆಯಲ್ಲಿರುತ್ತಾರೆ. ಇನ್ನು ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ವನ್ಯಜೀವಿಗಳ ಕುರಿತ ಚಿತ್ರ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆಯುತ್ತಿರುವುದು ಸಂತಸದ ವಿಚಾರ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯಪಾಲರು ವನ್ಯಜೀವಿ ಸಪ್ತಾಹ ಹಿನ್ನೆಲೆ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾಯದ ನೂತನ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕದಲ್ಲಿ ವನ್ಯಜೀವಿ ನಿರ್ವಹಣೆ ಕುರಿತು ನಿವೃತ್ತ ಐಎಎಸ್ ಅಧಿಕಾರಿ ದೀಪಕ್ ಶರ್ಮಾ ರಚಿಸಿರುವ `ವೈಡ್‍ಲೈಫ್ ಮ್ಯಾನೇಜ್‍ಮೆಂಟ್ ಇನ್ ಕರ್ನಾಟಕ' ಕೃತಿಯನ್ನು ಬಿಡುಗಡೆ ಮಾಡಿದರು.

ಅರಣ್ಯ ಇಲಾಖೆ ಸಹಕಾರದೊಂದಿಗೆ ಅರೋಚ ಸಂಸ್ಥೆ ಸಿದ್ಧಪಡೆಸಿರುವ ಆನೆ ಮತ್ತು ಮಾನವ ಸಂಘರ್ಷ ಕುರಿತ 35 ನಿಮಿಷಗಳ `ಡ್ರೈವಿಂಗ್ ಎಲಿಫ್ಯಾಂಟ್` ಎಂಬ ಸಾಕ್ಷ್ಯಾ ಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಸಂಜಯ್ ಮೋಹನ್, ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಹುಲಿಯೋಜನೆ) ರಂಗರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News