ಜಮ್ಮು ಕಾಶ್ಮೀರದಲ್ಲಿ ಶಾಲೆ-ಕಾಲೇಜು ಮರು ಆರಂಭ: ವಿದ್ಯಾರ್ಥಿಗಳ ಹಾಜರಾತಿ ಕ್ಷೀಣ

Update: 2019-10-10 05:13 GMT

ಶ್ರೀನಗರ, ಅ. 10: ಜಮ್ಮು ಹಾಗೂ ಕಾಶ್ಮೀರದಲ್ಲಿ ಬುಧವಾರ ಎಲ್ಲ ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಆರಂಭವಾಗಿವೆ. ಆದರೆ, ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ತುಂಬಾ ಕಡಿಮೆ ಇತ್ತು. ‘‘ಪರಿಸ್ಥಿತಿ ಸರಿಯಾಗಿಲ್ಲ. ಅದುವೇ ಸಮಸ್ಯೆ. ಸಂವಹನ ಇಲ್ಲ. ಸಾರ್ವಜನಿಕ ಸಾರಿಗೆ ಇಲ್ಲ. ಪೋಷಕರು ತಮ್ಮ ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳುಹಿಸಲು ಆತಂಕಪಟ್ಟುಕೊಳ್ಳುತ್ತಿದ್ದಾರೆ’’ ಎಂದು ಶ್ರೀನಗರದಲ್ಲಿ ಶಿಕ್ಷಣ ಪಡೆಯುತ್ತಿರುವ ಬಿ.ಕಾಂ. ವಿದ್ಯಾರ್ಥಿ ರುಬಾನ್ ತಿಳಿಸಿದ್ದಾರೆ.

 ರುಬಾನ್ ಮಾತ್ರ ಈ ಅಭಿಪ್ರಾಯ ಹೊಂದಿಲ್ಲ. ಎಸ್.ಪಿ. ಕಾಲೇಜಿನ ಇತರ ಹಲವು ವಿದ್ಯಾರ್ಥಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘‘ಪರಿಸ್ಥಿತಿ ಪರಿಶೀಲಿಸಲು ನಾವು ಇಲ್ಲಿಗೆ ಆಗಮಿಸಿದ್ದೇವೆ. ಕಾಲೇಜಿನ ಒಳಗಡೆ ಅರೆ ಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಇದರಿಂದ ಕಾಲೇಜಿಗೆ ಹೋಗಲು ಮನಸ್ಸಾಗುತ್ತಿಲ್ಲ’’ ಇಲ್ಲಿನ ಇನ್ನೋರ್ವ ವಿದ್ಯಾರ್ಥಿ ಹೇಳಿದ್ದಾರೆ.

ಕಳೆದ ಎರಡು ತಿಂಗಳಿಂದ ಪಡೆಗಳು ತಮಗಾಗಿ ಕಾಲೇಜನ್ನು ಬಳಸಿಕೊಂಡಂತೆ ಕಾಣುತ್ತಿದೆ. ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ನಮಗೆ ಭವಿಷ್ಯದ ಬಗ್ಗೆ ಭೀತಿ ಉಂಟಾಗಿದೆ. ನಮ್ಮ ಹೆತ್ತವರು ಕೂಡ ಆತಂಕಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News