525 ಸುಸ್ತಿದಾರರ 2.17 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ ಬ್ಯಾಂಕ್ ಗಳು: ಆರ್ ಟಿಐಯಿಂದ ಬಹಿರಂಗ

Update: 2019-10-10 15:35 GMT

ಹೊಸದಿಲ್ಲಿ,ಅ.10: ಭಾರತೀಯ ಬ್ಯಾಂಕುಗಳು ಕಳೆದ ನಾಲ್ಕು ವರ್ಷಗಳಲ್ಲಿ 525 ಸುಸ್ತಿದಾರರ ಅನುತ್ಪಾದಕ ಆಸ್ತಿಗಳನ್ನು (ವಸೂಲಾಗದ ಸಾಲಗಳು) ವಜಾಗೊಳಿಸುವ ಮೂಲಕ 2.17 ಲಕ್ಷ ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿವೆ ಎಂದು ಆರ್‌ ಟಿಐ ವಿಚಾರಣೆಗಳಿಂದ ಲಭ್ಯ ದತ್ತಾಂಶಗಳನ್ನು ಉಲ್ಲೇಖಿಸಿ ಸಿಎನ್‌ಎನ್-ನ್ಯೂಸ್ 18 ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸೆಪ್ಟೆಂಬರ್, 2014ಕ್ಕೂ ಮೊದಲು ವಜಾ ಮಾಡಲಾಗಿರುವ 100 ಕೋ.ರೂ. ಅಥವಾ ಅದಕ್ಕೂ ಹೆಚ್ಚಿನ ಅನುತ್ಪಾದಕ ಆಸ್ತಿಗಳ ವಿವರಗಳು ಲಭ್ಯವಾಗಿಲ್ಲ. 2014-15ನೇ ಹಣಕಾಸಿನ ವರ್ಷದ ಅಂತ್ಯಕ್ಕೆ 109 ಸುಸ್ತಿದಾರರ 40,798 ಕೋ.ರೂ.ಗಳಷ್ಟು ಕೆಟ್ಟ ಸಾಲಗಳನ್ನು ಬ್ಯಾಂಕುಗಳು ವಜಾ ಮಾಡಿದ್ದವು. 2015-16ನೇ ಸಾಲಿನಲ್ಲಿ 90 ಸುಸ್ತಿದಾರರ ಇನ್ನೂ 29,178 ಕೋ.ರೂ.ಗಳ ಸಾಲವನ್ನು ತೊಡೆದುಹಾಕಲಾಗಿತ್ತು.

ಆದರೆ 2016-17ರಲ್ಲಿ ಬ್ಯಾಂಕುಗಳು 144 ಹೊಸ ಸುಸ್ತಿದಾರರ 57,821 ಕೋ.ರೂ.ಗಳ ಕೆಟ್ಟ ಸಾಲಗಳನ್ನು ತಮ್ಮ ಬ್ಯಾಲೆನ್ಸ್ ಶೀಟ್‌ಗಳಿಂದ ವಜಾಗೊಳಿಸಿದ್ದವು. ಇದು ಹಿಂದಿನ ವರ್ಷ ವಜಾ ಮಾಡಲಾದ ಸಾಲಗಳ ಮೊತ್ತಕ್ಕಿಂತ ದುಪ್ಪಟ್ಟು ಆಗಿದ್ದು,ಇದೇ ವರ್ಷದಲ್ಲಿ ನರೇಂದ್ರ ಮೋದಿ ಸರಕಾರವು 1,000 ರೂ. ಮತ್ತು 500 ರೂ.ಗಳ ನೋಟುಗಳನ್ನು ರದ್ದುಗೊಳಿಸಿತ್ತು. ಸರಕಾರದ ಈ ಕ್ರಮವು ದೇಶದ ಅರ್ಥವ್ಯವಸ್ಥೆಯಲ್ಲಿ ನಗದು ಹರಿವಿನ ಕೊರತೆಯನ್ನುಂಟು ಮಾಡಿದ್ದು, ಆರ್ಥಿಕತೆಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಿತ್ತು.

ಇದರೊಂದಿಗೆ 2014ರಿಂದ ಮಾರ್ಚ್ 2017ರವರೆಗಿನ ಅವಧಿಯಲ್ಲಿ ವಜಾಗೊಳಿಸಲಾಗಿದ್ದ ಸಾಲಗಳ ಒಟ್ಟು ಮೊತ್ತ 1.28 ಲ.ಕೋ.ರೂ.ಗೇರಿತ್ತು. 2017-18ನೇ ಸಾಲಿನಲ್ಲಿ ಬ್ಯಾಂಕುಗಳು 182 ಸಾಲಗಾರರ 89,324 ಕೋ.ರೂ.ಗಳ ಸಾಲಗಳನ್ನು ವಜಾಗೊಳಿಸಿವೆ. ಹೀಗೆ 2014ರಿಂದ ನಾಲ್ಕು ವರ್ಷಗಳಲ್ಲಿ ಬ್ಯಾಂಕುಗಳು ಒಟ್ಟು 525 ಸುಸ್ತಿದಾರರಿಂದಾಗಿ 2.17 ಲ.ಕೋ.ರೂ.ಗಳ ನಷ್ಟವನ್ನು ಅನುಭವಿಸಿವೆ ಎಂದು ವರದಿಯು ಹೇಳಿದೆ.

76,600 ಕೋ.ರೂ. ಸಾಲಮನ್ನಾ ಮಾಡಿದ ಎಸ್‌ಬಿಐ

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ 220 ಸುಸ್ತಿದಾರರ 76,600 ಕೋ.ರೂ.ಗಳ ಕೆಟ್ಟ ಸಾಲಗಳನ್ನು ವಜಾ ಮಾಡಿದೆ. 2019 ಮಾ.31ಕ್ಕೆ ಇದ್ದಂತೆ 33 ಸುಸ್ತಿದಾರರಿಂದ ವಸೂಲಾಗದ 37,700 ಕೋ.ರೂ.ಗಳ ಸಾಲಬಾಕಿಯನ್ನು ಹೊಂದಿರುವುದಾಗಿ ಅದು ಘೋಷಿಸಿದೆ. ಈ ಸಾಲಗಳು 500 ಕೋ.ರೂ. ಮತ್ತು ಅದಕ್ಕೂ ಹೆಚ್ಚಿನ ಮೊತ್ತದ್ದಾಗಿವೆ.

ಇತರ ಬ್ಯಾಂಕುಗಳು ವಜಾ ಮಾಡಿರುವ ಸಾಲದ ವಿವರಗಳು:

ಬ್ಯಾಂಕ್‌                   ಸುಸ್ತಿದಾರರ ಸಂಖ್ಯೆ        ಸಾಲದ ಮೊತ್ತ

ಪಿಎನ್‌ಬಿ                        106                  36,061 ಕೋ.ರೂ.

ಐಡಿಬಿಐ                          71                   26,219 ಕೋ.ರೂ.

ಕೆನರಾ ಬ್ಯಾಂಕ್                70                    27,382 ಕೋ.ರೂ.

ಬ್ಯಾಂಕ್ ಆಫ್ ಇಂಡಿಯಾ 56,ಕಾರ್ಪೊರೇಷನ್ ಬ್ಯಾಂಕ್ 50,ಬ್ಯಾಂಕ್ ಆಫ್ ಬರೋಡಾ 46,ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 45,ಎಕ್ಸಿಸ್ ಬ್ಯಾಂಕ್ 43,ಐಸಿಐಸಿಐ ಬ್ಯಾಂಕ್ 37 ಸುಸ್ತಿದಾರರ 100ಕೋ.ರೂ. ಮತ್ತು ಅದಕ್ಕೂ ಹೆಚ್ಚಿನ ಸಾಲಗಳನ್ನು ವಜಾ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News