ಜಮ್ಮುಕಾಶ್ಮೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ತೆರವು

Update: 2019-10-10 16:20 GMT

ಹೊಸದಿಲ್ಲಿ, ಅ. 10: ‘ಭಯೋತ್ಪಾದನೆ ಬೆದರಿಕೆ’ ಇರುವುದರಿಂದ ಜಮ್ಮುಕಾಶ್ಮೀರದಿಂದ ತೆರವುಗೊಳ್ಳುವಂತೆ ಪ್ರವಾಸಿಗಳಿಗೆ ಭದ್ರತಾ ಸಲಹೆ ನೀಡಿದ ಎರಡು ತಿಂಗಳ ಬಳಿಕ ಗುರುವಾರ ಕಣಿವೆ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ.

ಸಲಹೆಗಾರರು ಹಾಗೂ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಭದ್ರತಾ ಪರಿಶೀಲನಾ ಸಭೆ ನಡೆಸಿದ ಬಳಿಕ ಪ್ರವಾಸಿಗರ ಪ್ರವೇಶಕ್ಕೆ ವಿಧಿಸಿದ ನಿರ್ಬಂಧವನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಿಂದೆ ತೆಗೆದಿದ್ದಾರೆ.

ಭಯೋತ್ಪಾದಕ ಬೆದರಿಕೆ ಬಗ್ಗೆ ಬೇಹುಗಾರಿಕೆ ಮಾಹಿತಿ ಇರುವುದಾಗಿ ಹೇಳಿ ಕೇಂದ್ರ ಸರಕಾರ ಆಗಸ್ಟ್ 2ರಂದು ವಾರ್ಷಿಕ ಅಮರನಾಥ ಯಾತ್ರೆ ರದ್ದುಗೊಳಿಸಿತ್ತು. ಯಾತ್ರಿಗಳು ಯಾತ್ರೆ ಮೊಟಕುಗೊಳಿಸಿ ಕಣಿವೆಯಿಂದ ಕೂಡಲೇ ಹಿಂದಿರುಗುವಂತೆ ಸೂಚಿಸಿತ್ತು.

ಈ ನಡೆಯ ಬಳಿಕ ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 37ನ್ನು ಸಂಸತ್ತು ರದ್ದುಗೊಳಿಸಿತ್ತು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

ಅನಂತರ ಆಡಳಿತ ಜಮ್ಮುಕಾಶ್ಮೀರದಲ್ಲಿ ನಿರ್ಬಂಧ ಹೇರಿತ್ತು. ಟೆಲಿಫೋನ್ ಸಂಪರ್ಕ ಕಡಿತಗೊಳಿಸಿತ್ತು. ರಾಜಕೀಯ ನಾಯಕರನ್ನು ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರಲು ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News