ಜಾವೆಲಿನ್: ಅನ್ನು ರಾಣಿಗೆ ಚಿನ್ನ

Update: 2019-10-11 04:46 GMT

ರಾಂಚಿ, ಅ.10: ಉತ್ತಮ ಪ್ರದರ್ಶನ ಮುಂದುವರಿಸಿದ ಅನ್ನು ರಾಣಿ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಚಿನ್ನದ ಪದಕ ಬಾಚಿಕೊಂಡರು.

ಈ ತಿಂಗಳಾರಂಭದಲ್ಲಿ ರಾಷ್ಟ್ರೀಯ ದಾಖಲೆ(62.43ಮೀ.)ಯೊಂದಿಗೆ ದೋಹಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದ ಅನ್ನುರಾಣಿ ಗುರುವಾರ ಆರು ಪ್ರಯತ್ನದಲ್ಲಿ ಪ್ರತಿಸ್ಪರ್ಧಿ ರೈಲ್ವೇಸ್‌ನ ಶರ್ಮಿಳಾ ಕುಮಾರಿಯನ್ನು ಸೋಲಿಸಿದರು. 25ರ ಹರೆಯದ ರಾಣಿ 58.60 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸುವ ಮೊದಲು ತನ್ನ ಮೊದಲ ಎಸೆತದಲ್ಲಿ 56.97 ಮೀ.ದೂರಕ್ಕೆ ಜಾವೆಲಿನ್ ಎಸೆದು ತನ್ನ ಉದ್ದೇಶ ಸ್ಪಷ್ಟಪಡಿಸಿದರು. ಆ ಬಳಿಕ 55.97 ಮೀ.. 58.31ಮೀ.,57.29ಮೀ. ಹಾಗೂ 56.86 ಮೀ.ದೂರಕ್ಕೆ ಜಾವೆಲಿನ್ ಎಸೆದರು. ಒಎನ್‌ಜಿಸಿಯ ಸಿದ್ದಾರ್ಥ್ ತಿಂಗಳಾಯ ಪುರುಷರ 110 ಮೀ.ಹರ್ಡಲ್ಸ್ ನಲ್ಲಿ 13.83 ಸೆಕೆಂಡ್‌ನಲ್ಲಿ ಗುರಿ ತಲುಪಿ ಮುಂದಿನ ಸುತ್ತಿಗೆ ಅರ್ಹತೆ ಪಡೆದ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. ಜಿನ್ಸನ್ ಜಾನ್ಸನ್ ಹಾಗೂ ಅಜಯ್ ಕುಮಾರ್ ಪುರುಷರ 1500 ಮೀ.ಓಟದ ಹೀಟ್ಸ್‌ನಲ್ಲಿ ಜಯಶಾಲಿಯಾಗಿದ್ದು, ಫೈನಲ್‌ಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News