ನನಗೇನು ಸಮಯ ಭಿಕ್ಷೆ ಕೊಡ್ತೀರಾ: ಸ್ಪೀಕರ್ ಕಾಗೇರಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

Update: 2019-10-11 15:07 GMT

ಬೆಂಗಳೂರು, ಅ. 11: ‘ನನ್ನ ಮಾತಿಗೆ ಸಮಯ ನಿಗದಿ ಪಡಿಸುವ ಹಕ್ಕು ಯಾರಿಗೂ ಇಲ್ಲ. ಸರಕಾರ ಹೇಳಿದಂತೆ ನಾವು ಮಾತನಾಡಲು ಆಗುವುದಿಲ್ಲ. ನನಗೆ ನೀವು ಸಮಯ ಭಿಕ್ಷೆ ನೀಡುತ್ತಿದ್ದೀರಾ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಿಡಿಕಾರಿದರು.

ಶುಕ್ರವಾರ ವಿಧಾನಸಭೆಯಲ್ಲಿ ನಿಮಯ 69ರಡಿ ವಿಷಯ ಪ್ರಸ್ತಾಪಿಸುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಸ್ವೀಕರ್ ಕಾಗೇರಿ, ಸಮಯ ಬಹಳ ಕಡಿಮೆ ಇದೆ, ಕೂಡಲೇ ನಿಮ್ಮ ಮಾತು ಮುಗಿಸಿ ಎಂದು ಸೂಚಿಸಿದರು. ಇದಕ್ಕೆ ಕೆರಳಿದ ಸಿದ್ದರಾಮಯ್ಯ ವಿಪಕ್ಷ ನಾಯಕ ಮಾತನಾಡಲು ಸಮಯ ನಿಗದಿ ಸರಿಯಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ತೀವ್ರ ಸ್ವರೂಪದ ನೆರೆ ಹಾನಿ ಉಂಟಾಗಿದ್ದು, ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಸರಕಾರದ ವೈಫಲ್ಯಗಳನ್ನು ಹೇಳಬೇಕಿದೆ. ಈಗಲೇ ಮಾತು ಮುಗಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಗೇರಿ ‘ನಿಯಮ 69ರಡಿ ಕಾಲಮಿತಿ ನಿಗದಿಗೆ ಸ್ಪೀಕರ್‌ಗೆ ಅವಕಾಶವಿದೆ. ಹೀಗಾಗಿ ನಿಮ್ಮ ಮಾತು ಇನ್ನು ಐದು ನಿಮಿಷದಲ್ಲಿ ಮುಗಿಸಿ’ ಎಂದು ಸೂಚಿಸಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ನಾನು ವಿಪಕ್ಷ ನಾಯಕ. ಪ್ರಮುಖ ವಿಚಾರಗಳ ಬಗ್ಗೆ ಮಾತನಾಡುವುದು ನನ್ನ ಹಕ್ಕು. ನಾನು ಇಷ್ಟೇ ಸಮಯ ಮಾತನಾಡಬೇಕೆಂದು ಹೇಳುವ ಅಧಿಕಾರ ಯಾರಿಗೂ ಇಲ್ಲ’ ಎಂದು ಹೇಳಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಿಎಂ ಯಡಿಯೂರಪ್ಪ, ಸ್ಪೀಕರ್ ಆದೇಶ ಪಾಲಿಸುವುದಿಲ್ಲ ಎಂದರೆ ಸದನ ಹೇಗೆ ನಡೆಸಬೇಕು. ನಾಲ್ಕೈದು ಗಂಟೆ ಒಬ್ಬರೆ ಮಾತನಾಡಿದರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ? ಬೇರೆಯವರಿಗೆ ಅವಕಾಶ ನೀಡುವುದು ಬೇಡವೇ?’ ಎಂದು ತಿರುಗೇಟು ನೀಡಿದರು.

ಇದರಿಂದ ಮತ್ತಷ್ಟು ಕೆರಳಿದ ಸಿದ್ದರಾಮಯ್ಯ, ನಿಮ್ಮ ಇಚ್ಛೆಯಂತೆ ಅಧಿವೇಶನ ನಡೆಸಬೇಕೆಂದರೆ ಕಲಾಪ ಏಕೆ ಕರೆಯುತ್ತೀರಿ, ಇಲ್ಲಿ ಜನರ ಸಮಸ್ಯೆಗಳನ್ನು ಚರ್ಚೆ ಮಾಡುವುದು ಬೇಡ ಎಂದರೆ ನಾನು ಈಗಲೇ ಕೂರುತ್ತೇನೆ. ಈ ಸರಕಾರಕ್ಕೆ ಮಾನವೀಯತೆ ಇದೆ ಎಂದು ಹೇಳಬೇಕೇ? ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್‌ ಕುಮಾರ್, ‘ಸ್ಪೀಕರ್ ಅವರಿಂದ ಕುಳಿತುಕೊಳ್ಳುವಂತೆ ಆದೇಶ ಬಂದರೆ ಕುಳಿತುಬಿಡಿ. ಇದು ಸರಿಯಾದ ವಿಧಾನ ಅಲ್ಲ, ವಿಪಕ್ಷ ನಾಯಕ ಸ್ಥಾನಕ್ಕೆ ಎಲ್ಲರೂ ಗೌರವ ನೀಡಬೇಕು. ಅವರ ಮಾತಿಗೆ ಕಡಿವಾಣ ಹಾಕುವುದು ಸಲ್ಲ ಎಂದರು.

ಬುದ್ಧಿವಂತಿಕೆ ಪ್ರದರ್ಶನಕ್ಕಲ್ಲ: ಸ್ಪೀಕರ್ ಸ್ಥಾನದ ಸೂಚನೆ ಎಲ್ಲರೂ ಪಾಲಿಸಬೇಕೆಂದು ಕಾಗೇರಿ ತಿಳಿಸಿದರು. ಈ ವೇಳೆ ರಮೇಶ್‌ ಕುಮಾರ್ ‘ನಾನು ಯಾವತ್ತೂ ಯಾವುದೇ ವಿಪಕ್ಷ ನಾಯಕರಿಗೂ ಮಾತು ಮುಗಿಸಿ’ ಎಂದು ಒತ್ತಾಯ ಮಾಡಿಲ್ಲ ಎಂದರು.

‘ಹೌದ.. ಹೌದು.. ಇಲ್ಲಿ ಕುಳಿತವರು ಯಾವ ವೇಳೆ ವಿಪಕ್ಷ ನಾಯಕರನ್ನು ಎಷ್ಟು ಬಾರಿ ಹೇಳಿ ಕೂರಿಸಿದ್ದಾರೆನ್ನುವುದನ್ನು ನೋಡಿದ್ದೇನೆ. ಬುದ್ಧಿವಂತಿಕೆ ಪ್ರದರ್ಶನಕ್ಕೆ ಸ್ಪೀಕರ್ ಸ್ಥಾನವಿಲ್ಲ. ಇಲ್ಲಿ ಯಾರು ಎಷ್ಟು ಬುದ್ಧಿವಂತಿಕೆ ತೋರಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ’ ಎಂದು ಕಾಗೇರಿ, ರಮೇಶ್‌ ಕುಮಾರ್ ಅವರಿಗೆ ತಿರುಗೇಟು ನೀಡಿದರು.

ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಕಾಗೇರಿ ವಿರುದ್ಧ ಏರಿದ ಧ್ವನಿಯಲ್ಲಿ ವಿಪಕ್ಷ ನಾಯಕರ ಮಾತಿಗೆ ಕಡಿವಾಣ ಸರಿಯಲ್ಲ ಎಂದು ಆಕ್ಷೇಪಿಸಿದರು. ತಕ್ಷಣವೇ ಎದ್ದು ನಿಂತ ಸಚಿವ ಈಶ್ವರಪ್ಪ, ರಮೇಶ್ ಕುಮಾರ್ ಏನು ಹೇಳುತ್ತಾರೋ ಅದೇ ಶ್ರೇಷ್ಠ. ಸ್ಪೀಕರ್ ಸ್ಥಾನದಲ್ಲಿ ಕುಳಿತಾಗ ಒಂದು, ಕೆಳಗೆ ಕೂತಾಗ ಮತ್ತೊಂದು’ ಎಂದರು.

‘ಈಶ್ವರಪ್ಪನವರೆ ನಾವು ನಿಮಗೆ ಸಂಪೂರ್ಣ ಶರಣಾಗಿದ್ದೇನೆ. ಯಾರ್ಯಾರ ಯೋಗ್ಯತೆ ಏನೆಂದು ಗೊತ್ತಿದೆ’ ಎಂದು ರಮೇಶ್‌ ಕುಮಾರ್ ಕೈಜೋಡಿಸಿ ನಮಸ್ಕರಿಸಿದರು. ಈ ಗೊಂದಲದ ಮಧ್ಯೆ ಮಾತು ಮುಂದುವರಿಸಿದ ಸಿದ್ದರಾಮಯ್ಯ ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ, ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ತಮ್ಮ ಮಾತು ನಿಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News